ಲಿಂಗತ್ವ ಅಲ್ಪಸಂಖ್ಯಾತರ ದ.ಕ. ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆ

Update: 2021-03-04 15:16 GMT

ಮಂಗಳೂರು, ಮಾ.4: ಲಿಂಗತ್ವ ಅಲ್ಪಸಂಖ್ಯಾತರ ದ.ಕ.ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯು ಗುರುವಾರ ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ‘ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಎಲ್ಲರೊಂದಿಗೆ ಬೆರೆಯಬೇಕು. ಸರಕಾರದಿಂದ ನೀಡಿರುವ ಸೌಲಭ್ಯವನ್ನು ಸದುಪಯೋಗ ಪಡಿಸುವುದರೊಂದಿಗೆ ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಗಳಾಗಬೇಕು ಎಂದರು.

ಸರಕಾರದಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ ನೀಡುವುದಲ್ಲದೆ ಸರಕಾರದಿಂದ ಅವರಿಗೆ ನೀಡಿರುವ ಮೂಲಭೂತ ಸೌಕರ್ಯ ಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದ ಡಿಸಿ ಜಿಲ್ಲೆಯಲ್ಲಿ ಮೈತ್ರಿ ಯೋಜನೆಯಡಿ 22 ಫಲಾನುಭವಿಗಳಿದ್ದಾರೆ. ಅವರಿಗೆ ಸರಿಯಾಗಿ ಪಿಂಚಣಿ ಬರುತ್ತಿಲ್ಲ. ಎಂಬ ಬಗ್ಗೆ ದೂರು ಕೇಳಿ ಬರುತ್ತಿದೆ. ಈ ಬಗ್ಗೆ ಕಂದಾಯ ಇಲಾಖೆಯ ಶಿರಾಸ್ಥಿದಾರರು ಗಮನಹರಿಸುವುದರೊಂದಿಗೆ ಎಲ್ಲಾ ಫಲಾನುಭಗಳಿಗೆ ಪಿಂಚಣಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ ಒದಗಿಸಲು ಜಾಗ ಗುರುತಿಸುವುದರೊಂದಿಗೆ ಅವರಿಂದ ಅರ್ಜಿಗಳನ್ನು ಸ್ವೀಕರಿಸಿ ಅರ್ಹರಿಗೆ ನಿವೇಶನ ನೀಡಬೇಕು ಎಂದರು.

ಹಿಂದುಕುಷ್ಟ್ ನಿವಾರಣ್ ಸಂಘ್‌ನಲ್ಲಿ ಕಾರ್ಯನಿರ್ವಸುತ್ತಿರುವ ದಮನಿತ ಮಹಿಳೆಯರಿಗೆ ಸೂಕ್ತ ಸಲಹೆ ನೀಡಿ ಅವರನ್ನು ಕೌನ್ಸಿಲಿಂಗ್ ನಡೆಸಿ ಅದರಿಂದ ಹೊರತರುವ ಪ್ರಯತ್ನ ನಡೆಸಬೇಕು. ಇದರಲ್ಲಿ 10 ಮಂದಿ ಎಚ್‌ಐವಿ ಸೋಂಕಿತರಿದ್ದು, ಅವರನ್ನು ಸರಿಯಾಗಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಬೇಕು. ಅಲ್ಲದೆ ಎಲ್ಲಾ ಲಿಂಗತ್ವ ಅಲ್ಪಸಂಖ್ಯಾತರಿಗೂ ಶಿಬಿರ ಆಯೋಜಿಸಿ ಅಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು ಎಂದರು

ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ದಮನಿತ ಮಹಿಳೆಯರಿಗೆ ಪಡಿತರ ಚೀಟಿಗಳನ್ನು ನೀಡಬೇಕು ಎಂದ ಅವರು, ಈಗಾಗಲೇ ಗುರುತಿಸಿರುವ 17 ದಮನಿತ ಮಹಿಳೆಯರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಿಪಿಎಲ್ ಕಾರ್ಡ್‌ನ್ನು ಶೀಘ್ರವಾಗಿ ನೀಡಬೇಕು ಎಂದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಟ್ರೂಡ್ ವೇಗಸ್, ವೆನ್ಲಾಕ್ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಶಾನ್‌ಭೋಗ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News