ತ್ರಾಸಿ ಗ್ರಾಪಂನ 35,800 ರೂ. ತೆರಿಗೆ ಹಣ ಕಳವು

Update: 2021-03-04 15:52 GMT

ಗಂಗೊಳ್ಳಿ, ಮಾ.4: ತಾಸ್ರಿ ಗ್ರಾಪಂನ ಕಚೇರಿ ಅಲ್ಮೇರಾದಲ್ಲಿ ಮಂಗಳವಾರ ಸಂಜೆ ಇರಿಸಿದ್ದ ಆ ದಿನ ತೆರಿಗೆಯಿಂದ ಸಂಗ್ರಹವಾದ ಹಣ 35,833 ರೂ.ವನ್ನು ರಾತ್ರಿ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಕಳವು ನಡೆಸಿದ್ದು, ಮರುದಿನ ಬೆಳಗ್ಗೆ ಸಿಬ್ಬಂದಿ ಕೆಲಸಕ್ಕೆ ಬಂದಾಗ ಬೆಳಕಿಗೆ ಬಂದಿದೆ.

ಈ ಬಗ್ಗೆ ತ್ರಾಸಿ ಗ್ರಾಪಂನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾ ಎಸ್. ಅವರು ಗಂಗೊಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪ್ರತಿದಿನ ತೆರಿಗೆಯಿಂದ ಸಂಗ್ರಹವಾಗುವ ಹಣವನ್ನು ಸಂಜೆ ಕ್ರೋಡೀಕರಿಸಿ ಮರುದಿನ ಬ್ಯಾಂಕ್ ಖಾತೆ ಜಮಾ ಮಾಡುತಿದ್ದು, ಅದರಂತೆ ಮಾ.2ರಂದು ಸಂಜೆ ಸಂಗ್ರಹವಾದ ಆ ದಿನದ ವಿವಿಧ ತೆರಿಗೆ ಹಣ 35,833ರೂ.ವನ್ನು ಸಿಬ್ಬಂದಿಗಳು 5:45ಕ್ಕೆ ಅಲ್ಮೇರಾದಲ್ಲಿ ಇರಿಸಿ ಕಚೇರಿಗೆ ಬೀಗ ಹಾಕಿ ತೆರಳಿದ್ದರು.

ಆದರೆ ಮರುದಿನ ಬೆಳಗ್ಗೆ 8:45ಕ್ಕೆ ಕಚೇರಿ ಸಿಬ್ಬಂದಿ ಬಂದು ಬಾಗಿಲು ತೆರೆದುನೋಡಿದಾಗ, ಎಲ್ಲಾ ಕಡತಗಳು ಹರಡಿ ಬಿದ್ದಿದ್ದು, ಬಳಿಕ ಪಿಡಿಓ ಹಾಗೂ ಇತರ ಸಿಬ್ಬಂದಿ ಬಂದು ಪರಿಶೀಲಿಸಿದಾಗ ಅಧ್ಯಕ್ಷರ ಕೊಠಡಿಯ ಮೀಟಿಂಗ್ ಹಾಲಂನ ಕಿಟಕಿಯ ಕಬ್ಬಿಣದ ಸರಳನ್ನು ಬಗ್ಗಿಸಿ ಒಳಬಂದ ದುಷ್ಕರ್ಮಿಗಳು ಅಲ್ಮೇರಾ ಹಾಗೂ ಕಪಾಟಿನ ಬೀಗ ಮುರಿದು ಅದರಲ್ಲಿರಿಸಿದ್ದ ಹಣವನ್ನು ಲಪಟಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News