ಕೋಸ್ಟ್‌ಗಾರ್ಡ್ ಅಕಾಡಮಿಗೆ ಮೀಸಲಿರಿಸಿದ ಜಾಗ ಅತಿಕ್ರಮಣ: ಆರೋಪ

Update: 2021-03-04 17:10 GMT

ಮಂಗಳೂರು, ಮಾ.4: ಮರವೂರು ಗ್ರಾಪಂ ವ್ಯಾಪ್ತಿಯ ಬಜ್ಪೆ ಕೆಂಜಾರು ಎಂಬಲ್ಲಿ ಸರಕಾರಿ ಜಮೀನು ಅತಿಕ್ರಮಿಸಿ ನಿರ್ಮಿಸಿದ್ದೆನ್ನಲಾದ ಗೋಶಾಲೆಯನ್ನು ಗುರುವಾರ ದ.ಕ. ಜಿಲ್ಲಾಡಳಿತವು ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿದೆ.

ಕೋಸ್ಟ್‌ಗಾರ್ಡ್ ಅಕಾಡಮಿಗೆ ಮೀಸಲಿರಿಸಿದ ಜಾಗದಲ್ಲಿ ಪ್ರಕಾಶ್ ಶೆಟ್ಟಿ ಎಂಬವರು ಕಾನೂನು ಬಾಹಿರವಾಗಿ ಗೋಶಾಲೆ ನಿರ್ಮಿಸಿದ್ದರೆನ್ನ ಲಾಗಿದೆ. ಅಲ್ಲದೆ ಸ್ಥಳೀಯ ಇತರ ಕೆಲವು ಮಂದಿ ಇಲ್ಲಿ ಅಕ್ರಮ ನಿರ್ಮಾಣ ಕಾಮಗಾರಿ ನಡೆಸಿದ್ದರು. ಕೆಂಜಾರುವಿನಲ್ಲಿ ಕೆಐಎಡಿಬಿ ವಶದಲ್ಲಿರುವ 160 ಎಕ್ರೆ ಜಮೀನನ್ನು ಕೋಸ್ಟ್‌ಗಾರ್ಡ್ ಅಕಾಡಮಿ ಸ್ಥಾಪಿಸಲು ಕೇಂದ್ರ ಸರಕಾರ ನಿರ್ಧರಿಸಿತ್ತು. ಇದರ ಸಮೀಪ ಜಮೀನು ಹೊಂದಿರುವ ಪ್ರಕಾಶ್ ಶೆಟ್ಟಿ ಎಂಬವರು ಅಕಾಡಮಿಗೆ ಮೀಸಲಿಟ್ಟ ಈ ಜಮೀನಿನ ಪೈಕಿ ಸುಮಾರು 20 ಸೆಂಟ್ಸ್ ಸ್ಥಳದಲ್ಲಿ ಕಳೆದ 8 ವರ್ಷದಿಂದ ‘ಕಪಿಲಾ’ ಎಂಬ ಗೋಶಾಲೆ ನಿರ್ಮಿಸಿ 300ಕ್ಕೂ ಅಧಿಕ ಗೋವುಗಳನ್ನು ಸಾಕುತ್ತಿದ್ದರು.

ಕೇಂದ್ರ ಸರಕಾರ ಮಂಜೂರುಗೊಳಿಸಿದ ಕೋಸ್ಟ್ ಗಾರ್ಡ್ ತರಬೇತಿ ಅಕಾಡಮಿಗೆ ಮೀಸಲಿರಿಸಿದ ಈ ಜಮೀನಿನ ಅತಿಕ್ರಮಣವನ್ನು ತೆರವುಗೊಳಿಸುವಂತೆ ಕೆಐಎಡಿಬಿ ಅಧಿಕಾರಿಗಳು ಸೂಚಿಸಿದ್ದರು. ಆದರೆ ಪ್ರಕಾಶ್ ಶೆಟ್ಟಿ ಎಸಿ ಹಾಗೂ ಡಿಸಿ ಕೋರ್ಟ್‌ಗೆ ಇದರ ವಿರುದ್ಧ ಮನವಿ ಸಲ್ಲಿಸಿದ್ದರು. ಆದರೆ ಅಲ್ಲಿಯೂ ಅತಿಕ್ರಮಿತ ಜಾಗವನ್ನು ತೆರವುಗೊಳಿಸುವಂತೆ ಆದೇಶಿಸಲಾಗಿತ್ತು. ಈ ಮಧ್ಯೆ ಸಂಸದರಿಗೂ ಮನವಿ ಸಲ್ಲಿಸಿದ್ದ ಪ್ರಕಾಶ್ ಶೆಟ್ಟಿ ಗೋಶಾಲೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿದ್ದರು.

ಅಕ್ರಮವಾಗಿ ತೆರೆದುಕೊಂಡಿರುವ ಈ ಗೋಶಾಲೆ ಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸೋಮವಾರ ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಮರವೂರು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಆವಾಗ ಸ್ಥಳಕ್ಕಾಗಮಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್ ಗೋಶಾಲೆ ತೆರವಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ವೇದಿಕೆಯ ಮುಖಂಡರಿಗೆ ಭರವಸೆ ನೀಡಿದ್ದರು.

ಈ ಮಧ್ಯೆ ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಗುರುವಾರ ಕೆಂಜಾರಿಗೆ ಆಗಮಿಸಿದ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಬಿನಾಯ್ ಮತ್ತಿತರ ಅಧಿಕಾರಿಗಳ ತಂಡ ಅಕ್ರಮ ಗೋಶಾಲೆ ತೆರವಿಗೆ ಮುಂದಾಯಿತು. ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿತ್ತು. ಬೆಳಗ್ಗೆ ಆರಂಭಗೊಂಡ ತೆರವು ಕಾರ್ಯಾಚರಣೆಯು ಸಂಜೆಯವರೆಗೂ ಮುಂದುವರಿದಿತ್ತು.
ಪೊಲೀಸ್ ಬಂದೋಬಸ್ತ್‌ನಲ್ಲಿ ಜೆಸಿಬಿ ಮೂಲಕ ನಡೆದ ಕಾರ್ಯಾಚರಣೆಯಲ್ಲಿ ಹಸುಗಳ ಶೆಡ್ ಮತ್ತಿತರ ಕಟ್ಟಡಗಳು, ತಡೆಗೋಡೆ ಸಹಿತ ಇಂಟರ್‌ಲಾಕ್ ಫ್ಯಾಕ್ಟರಿಯನ್ನು ನೆಲಸಮ ಮಾಡಲಾಗಿದೆ.

ಸರಕಾರದ ಪರವಾಗಿ ಹಲವು ಬಾರಿ ಗೋಶಾಲೆ ಮಾಲಕರ ಜೊತೆ ಮಾತುಕತೆ ನಡೆಸಲಾಗಿತ್ತು. ಆದರೆ ಅವರು ಸ್ಪಂದಿಸದ ಕಾರಣ ಪೊಲೀಸ್ ಬಂದೋಬಸ್ತ್ ನಲ್ಲಿ ಅತಿಕ್ರಮಣ ತೆರವುಗೊಳಿಸಲಾಗಿದೆ.

- ಮದನ್ ಮೋಹನ್, ಸಹಾಯಕ ಆಯುಕ್ತ, ಮಂಗಳೂರು ಉಪವಿಭಾಗ

ಗೋಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ನಡೆಸಲಾಗಿದೆ. ಆದರೆ ಮಾತುಕತೆ ಇತ್ಯರ್ಥಕ್ಕೆ ಮುನ್ನವೇ ಜಿಲ್ಲಾಡಳಿತ ಗೋಶಾಲೆ ಯನ್ನು ತೆರವುಗೊಳಿಸಿದೆ.

- ಪ್ರಕಾಶ್ ಶೆಟ್ಟಿ, ಕಪಿಲಾ ಗೋಶಾಲೆಯ ಮಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News