ಚೀನಾ, ಪಾಕ್‌ನ ಬೆದರಿಕೆ ಎದುರಿಸಲು ಭಾರತದ ಸೇನೆ ಸಿದ್ಧವಾಗಿರಬೇಕು: ಜ ರಾವತ್

Update: 2021-03-04 17:57 GMT

ಹೊಸದಿಲ್ಲಿ, ಮಾ.4: ವಿಶ್ವದಲ್ಲಿ ಅತ್ಯಧಿಕ ಸವಾಲು ಎದುರಿಸುವ ಸೇನೆಯಾಗಿರುವ ಭಾರತದ ಸೇನಾಪಡೆಗೆ ಚೀನಾ ಮತ್ತು ಪಾಕ್‌ನಿಂದ ಎದುರಾಗುವ ಬೆದರಿಕೆಯನ್ನು ಎದುರಿಸಲು ಸದಾ ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ರಕ್ಷಣಾ ಸಿಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗುರುವಾರ ಹೇಳಿದ್ದಾರೆ.

ಸಿಕಂದರಾಬಾದ್‌ನ ಡಿಫೆನ್ಸ್ ಮ್ಯಾನೇಜ್‌ಮೆಂಟ್ ಕಾಲೇಜಿನ ಆಶ್ರಯದಲ್ಲಿ ‘ ಪರಿವರ್ತನೆ : ಭಾರತೀಯ ಸಶಸ್ತ್ರ ಪಡೆಗಳಿಗೆ ಅನಿವಾರ್ಯ’ ಎಂಬ ವಿಷಯದಲ್ಲಿ ನಡೆದ ರಾಷ್ಟ್ರೀಯ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ಪರಿವರ್ತನೆಯ ಪರಿಕಲ್ಪನೆಯ ವಿಷಯದ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ. ಭಾರತವು ಸಂಕೀರ್ಣ ಭದ್ರತೆ ಮತ್ತು ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದರು.

ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದ ವ್ಯಾಖ್ಯಾನ, ಉನ್ನತ ರಕ್ಷಣಾ ಕಾರ್ಯತಂತ್ರದ ಮಾರ್ಗದರ್ಶನ, ಉನ್ನತ ರಕ್ಷಣಾ ಮತ್ತು ಕಾರ್ಯಕಾರಿ ಸಂಸ್ಥೆಗಳಲ್ಲಿ ರಚನಾತ್ಮಕ ಸುಧಾರಣೆ ಸೇರಿದಂತೆ ಹಲವು ಪ್ರಾಮುಖ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಮಾಹಿತಿ ಒಳಗೊಳ್ಳುವಿಕೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ 20ನೇ ಶತಮಾನದಲ್ಲಿ ಯುದ್ಧದ ಆಳ ಮತ್ತು ಸ್ವರೂಪದಲ್ಲಿ ತೀವ್ರ ಬದಲಾವಣೆ ಕಂಡುಬಂದಿದೆ. ಮತ್ತೊಬ್ಬರನ್ನು ಈ ಹಿಂದಿಗಿಂತಲೂ ಕ್ಷಿಪ್ರವಾಗಿ ಸಂಪರ್ಕಿಸಲು ಸಾಧ್ಯವಾಗುವ ಹೊಸ ಸಾಧನ ಮತ್ತು ಕೌಶಲ್ಯಗಳನ್ನು ಬಳಸಬಹುದಾಗಿದೆ. ಇದಕ್ಕೆ ಅನುಗುಣವಾಗಿ ಭಾರತ ತನ್ನ ರಕ್ಷಣಾ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಸಿದ್ಧಾಂತ, ತಂತ್ರಜ್ಞಾನ, ಪೋಷಣೆ, ಸ್ಥಿರತೆ ಸೇರಿದಂತೆ ವಿವಿಧ ಹಂತದಲ್ಲಿ ಸೇನಾ ಶಕ್ತಿಯ ಕುರಿತಾದ ಕಾರ್ಯನೀತಿಯ ಪರಿವರ್ತನೆ ಅಗತ್ಯವಾಗಿದೆ. ಸೀಮಿತ ಯುದ್ಧ ಸಾಮರ್ಥ್ಯದ ಸಣ್ಣ ಸೇನಾಪಡೆಯಾಗಿದ್ದ ಭಾರತದ ಸೇನೆ ಸ್ವಾತಂತ್ರ್ಯದ ನಂತರ ಆಧುನಿಕ ಯುದ್ದೋಪಕರಣಗಳ ಬೃಹತ್ ಸೇನಾಪಡೆಯಾಗಿ ಬೆಳೆದಿದೆ. ಸಾಂಪ್ರದಾಯಿಕ ಯುದ್ಧ ಮತ್ತು ಸೀಮಿತ ಯುದ್ಧಗಳಿಗೆ ಸಂಬಂಧಿಸಿದ ಸಾಂಸ್ಥಿಕ ರಚನೆಯನ್ನು ಮರುವಿನ್ಯಾಸಗೊಳಿಸುವ, ಮತ್ತು ಡಿಜಿಟಲೀಕರಣಗೊಂಡಿರುವ ಯುದ್ಧಕ್ಷೇತ್ರದಲ್ಲಿ ಜಂಟಿ ಆಕ್ರಮಣವನ್ನು ನಡೆಸಲು ಅನುಕೂಲವಾಗುವಂತೆ ಮರು ಸಜ್ಜುಗೊಳಿಸಬೇಕಿದೆ ಎಂದವರು ಹೇಳಿದ್ದಾರೆ.

  ಪ್ರಮುಖವಾಗಿ ಚೀನಾ ಮತ್ತು ಪಾಕಿಸ್ತಾನದಿಂದ ಎದುರಾಗುವ ಬೆದರಿಕೆ ಎದುರಿಸಲು ಸಜ್ಜಾಗಬೇಕಿದೆ. ಮುಂದಿನ ದಿನದಲ್ಲಿ ಚೀನಾವು ಹಿಂದು ಮಹಾಸಾಗರ ಪ್ರದೇಶ ಮತ್ತು ಭಾರತ ಸುತ್ತಮುತ್ತಲಿನ ದೇಶಗಳಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಮುಂದಾಗುತ್ತದೆ ಎಂದು ಜ. ರಾವತ್ ಹೇಳಿದರು. ನಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು, ನಮ್ಮ ರಕ್ಷಣಾ ಕಾರ್ಯತಂತ್ರವನ್ನು ರೂಪಿಸಲು ಪೂರಕವಾಗಿ ನಮ್ಮ ದ್ವೀಪಪ್ರದೇಶಗಳು ಒದಗಿಸುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ನಮ್ಮ ಸಮುದ್ರವ್ಯಾಪ್ತಿಯ ಹಿತಾಸಕ್ತಿ ಮತ್ತು ದೇಶದ ಆಸ್ತಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಭಾರತ ಕಾರ್ಯಯೋಜನೆ ರೂಪಿಸುವ ಅಗತ್ಯವಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News