ಮಗು ಮಾರಾಟ ಜಾಲ ಪ್ರಕರಣ: ಮಂಗಳೂರು ಪೊಲೀಸರಿಂದ ಆರೋಪಿಯ ಸೆರೆ

Update: 2021-03-05 10:10 GMT

ಮಂಗಳೂರು, ಮಾ.5: ಮಗು ಮಾರಾಟ ಜಾಲವೊಂದನ್ನು ಭೇದಿಸಿದ ಮಂಗಳೂರು ಪೊಲೀಸರು ಐದು ತಿಂಗಳ ಹೆಣ್ಮಗುವನ್ನು ರಕ್ಷಿಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಪೊಲೀಸ್ ಆಯುಕ್ತ ಶಶಿಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಮುಲ್ಕಿಯ ರೈಹಾನ್ (30) ಎಂಬಾತ ಬಂಧಿತ ಆರೋಪಿಯಾಗಿದ್ದು, ಮಗುವನ್ನು ಮಾರಾಟ ಮಾಡಿದ ಮತ್ತು ಸ್ವೀಕರಿಸಿದವರ ವಿರುದ್ಧ ತನಿಖೆ ನಡೆಸಲಾಗುವುದು ಎಂದರು.

ಮೈಸೂರಿನ ಒಡನಾಡಿ ಸಂಸ್ಥೆಯನ್ನು ಸಂಪರ್ಕಿಸಿದ್ದ ಆರೋಪಿ ರೈಹಾನ್ ಮಗುವೊಂದು ಮಾರಾಟಕ್ಕಿವೆ. ಬೇಕಿದ್ದರೆ ತಿಳಿಸಿ ಎಂದಿದ್ದ. ಅಲ್ಲದೆ ತಾನು ಈ ಹಿಂದೆ ಮಗು ಮಾರಾಟ ಮಾಡಿದ್ದೇನೆ. ಗಂಡು ಮಗುವಿಗೆ 6 ಲಕ್ಷ ರೂ.ಮತ್ತು ಹೆಣ್ಣು ಮಗುವಿಗೆ 4 ಲಕ್ಷ ರೂ. ನೀಡಬೇಕು. ಮುಂಗಡ ಹಣ ನೀಡಿದ ಒಂದುವರೆ ತಿಂಗಳೊಳಗೆ ಮಗುವನ್ನು ಕೊಡುವುದಾಗಿ ತಿಳಿಸಿದ್ದ. ಅದರಂತೆ ಒಡನಾಡಿ ಸಂಸ್ಥೆಯ ಸಿದ್ದಾರ್ಥ್ ಮತ್ತು ದೀಕ್ಷಿತ್ ಎಂಬವರು ಮಂಗಳೂರಿಗೆ ಆಗಮಿಸಿ ರೈಹಾನ್‌ನನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಅದರಂತೆ ಪಾಂಡೇಶ್ವರ ಎಸ್ಸೈ ಶೀತಲ್ ನೇತೃತ್ವದಲ್ಲಿ ಪೊಲೀಸ್ ತಂಡವನ್ನೂ ರಚಿಸಲಾಗುತ್ತದೆ. ಹಾಗೇ ಆರೋಪಿ ರೈಹಾನ್‌ನನ್ನು ಸಂಪರ್ಕಿಸಿ ಮಾತುಕತೆಗೆ ಕರೆದು ಬಳಿಕ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಈ ಹಿಂದೆಯೂ ಹಲವು ಮಕ್ಕಳನ್ನು ಮಾರಾಟ ಮಾಡಿದ್ದಾನೆ ಎನ್ನಲಾಗಿದೆ. ಮುಲ್ಕಿಯಲ್ಲಿ ಕೋಳಿ ಮಾರಾಟದ ಅಂಗಡಿ, ಫ್ಯಾನ್ಸಿ ನಡೆಸುತ್ತಿದ್ದ ಈತ ಅದರ ಮಧ್ಯೆ ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಹಾಸನದ ದಂಪತಿಯಿಂದ ಹೆಣ್ಮಗುವನ್ನು 3 ಲಕ್ಷಕ್ಕೆ ಪಡೆದ ಈತ ಕಾರ್ಕಳ ಮೂಲದ ಕವಿತಾ ಎಂಬವರಿಗೆ 6 ಲಕ್ಷ ರೂ,ಗೆ ಮಾರಾಟ ಮಾಡಿದ್ದಾನೆ. ಇದೀಗ ಮಗುವನ್ನು ರಕ್ಷಿಸಲಾಗಿದೆ. ಮಗು ಮಾರಾಟ ಮಾಡಿದ ಮತ್ತು ಮಗುವನ್ನು ಪಡೆದವರನ್ನು ವಿಚಾರಣೆ ನಡೆಸಿ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News