ಮಿಷನರಿ, ತಬ್ಲೀಗಿ ಚಟುವಟಿಕೆಗಳಿಗೆ ಒಸಿಐ ಅನುಮತಿ ಪಡೆಯುವ ಅಗತ್ಯವಿದೆ: ಗೃಹ ಸಚಿವಾಲಯ

Update: 2021-03-05 14:46 GMT

ಹೊಸದಿಲ್ಲಿ,ಮಾ.5: ಸಾಗರೋತ್ತರ ಭಾರತೀಯ ಪ್ರಜೆ (ಒಸಿಐ) ಕಾರ್ಡ್ ಹೊಂದಿರುವವರು ದೇಶದಲ್ಲಿ ಯಾವುದೇ ಧರ್ಮ ಪ್ರಚಾರ ಅಥವಾ ತಬ್ಲೀಘಿ,ಪರ್ವತಾರೋಹಣ ಮತ್ತು ಮಾಧ್ಯಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಬಯಸಿದರೆ ಇನ್ನು ಮುಂದೆ ಕೇಂದ್ರ ಸರಕಾರದಿಂದ ವಿಶೇಷ ಅನುಮತಿಯನ್ನು ಪಡೆದುಕೊಳ್ಳುವುದು ಅಗತ್ಯವಾಗುತ್ತದೆ. ಆದರೆ ದೇಶಿಯ ವಿಮಾನಯಾನಗಳ ಪ್ರಯಾಣ ಶುಲ್ಕ,ದೇಶದಲ್ಲಿನ ರಾಷ್ಟ್ರೀಯ ಉದ್ಯಾನವನಗಳು,ರಾಷ್ಟ್ರೀಯ ಸ್ಮಾರಕಗಳು ಮತ್ತು ಮ್ಯೂಝಿಯಮ್‌ಗಳಿಗೆ ಪ್ರವೇಶ ಶುಲ್ಕಗಳ ವಿಷಯದಲ್ಲಿ ಭಾರತೀಯ ಪ್ರಜೆಗಳಿಗೆ ಸಮಾನರೆಂದು ಪರಿಗಣಿಸುವ ಮೂಲಕ ಗೃಹ ಸಚಿವಾಲಯವು ಒಸಿಐ ಕಾರ್ಡ್‌ದಾರರಿಗೆ ಭಾರೀ ವಿನಾಯಿತಿಯನ್ನು ನೀಡಿದೆ.

ಒಸಿಐ ಕಾರ್ಡ್‌ದಾರರು ಯಾವುದೇ ಉದ್ದೇಶಕ್ಕಾಗಿ ಭಾರತಕ್ಕೆ ಭೇಟಿ ನೀಡಲು ಬಹುಪ್ರವೇಶ ಜೀವಿತಾವಧಿ ವೀಸಾ ಪಡೆಯಲು ಅರ್ಹರಾಗಿದ್ದಾರೆ. ಆದರೆ ಸಂಶೋಧನೆ,ಧರ್ಮ ಪ್ರಚಾರ ಅಥವಾ ತಬ್ಲೀಘಿ ಅಥವಾ ಪರ್ವತಾರೋಹಣ ಅಥವಾ ಮಾಧ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಬಯಸಿದರೆ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಯಿಂದ ಅಥವಾ ಭಾರತೀಯ ದೂತಾವಾಸದಿಂದ ವಿಶೇಷ ಅನುಮತಿಯನ್ನು ಪಡೆದುಕೊಳ್ಳುವುದು ಅಗತ್ಯವಾಗುತ್ತದೆ. ಒಸಿಐ ಕಾರ್ಡ್‌ದಾರರು ಭಾರತದಲ್ಲಿಯ ಯಾವುದೇ ವಿದೇಶಿ ರಾಯಭಾರಿ ಕಚೇರಿ ಅಥವಾ ವಿದೇಶಿ ಸರಕಾರದ ಸಂಸ್ಥೆಗಳಲ್ಲಿ ಇಂಟರ್ನಷಿಪ್ ಅಥವಾ ಉದ್ಯೋಗಕ್ಕೆ ಸೇರಲು,ಸರಕಾರದಿಂದ ಅಧಿಸೂಚಿತ ರಕ್ಷಿತ ಅಥವಾ ನಿರ್ಬಂಧಿತ ಅಥವಾ ನಿಷೇಧಿತ ಪ್ರದೇಶಗಳ ವ್ಯಾಪ್ತಿಯ ಸ್ಥಳಕ್ಕೆ ಭೇಟಿ ನೀಡಲು ಸಹ ಈ ನಿಯಮವು ಅನ್ವಯವಾಗುತ್ತದೆ ಎಂದು ಅಧಿಸೂಚನೆಯಲ್ಲಿ ಗೃಹ ಸಚಿವಾಲಯವು ತಿಳಿಸಿದೆ.

ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗಳಿಗೆ ಹಾಗೂ ಅವರ ಸಂಗಾತಿಗೆ ಭಾರತದಲ್ಲಿ ಅನಿರ್ದಿಷ್ಟಾವಧಿ ಕಾಲ ಜೀವಿಸಲು ಹಾಗೂ ಕೆಲಸ ಮಾಡಲು ಶಾಶ್ವತ ಅವಕಾಶ ನೀಡುವ ಕಾರ್ಡ್ ಒಸಿಐ ಆಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News