ಮುಕೇಶ್ ಅಂಬಾನಿ ಮನೆ ಸಮೀಪ ಪತ್ತೆಯಾಗಿದ್ದ ಸ್ಫೋಟಕ ತುಂಬಿದ್ದ ಕಾರಿನ ಮಾಲಕನ ಮೃತದೇಹ ಪತ್ತೆ

Update: 2021-03-05 12:53 GMT
File Photo (source: ndtv.com)

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ಇತ್ತೀಚೆಗೆ ಸ್ಫೋಟಕಗಳು ತುಂಬಿದ್ದ ಕಾರು ಪತ್ತೆಯಾದ ಪ್ರಕರಣವು ತಿರುವು ಪಡೆದುಕೊಂಡಿದ್ದು ಆ ಸ್ಕಾರ್ಪಿಯೋ ಎಸ್‍ಯುವಿ ಮಾಲಕನ ಮೃತದೇಹ ಇಂದು ಮುಂಬೈ ಸಮೀಪದ ಹಳ್ಳದಲ್ಲಿ ಪತ್ತೆಯಾಗಿದೆ ಎಂದು ಥಾಣೆ ಪೊಲೀಸರು ತಿಳಿಸಿದ್ದಾರೆ. ಆಕಸ್ಮಿಕ ಸಾವು ಪ್ರಕರಣವನ್ನು ಈ ಸಂಬಂಧ ದಾಖಲಿಸಲಾಗಿದೆ.

ಅಂಬಾನಿ ಕುಟುಂಬದ 27 ಅಂತಸ್ತುಗಳ ನಿವಾಸ ಎಂಟಿಲಿಯಾದಿಂದ ಸುಮಾರು 1.4 ಕಿಮೀ ದೂರದಲ್ಲಿ ನಿಂತಿದ್ದ ಕಪ್ಪು ಬಣ್ಣದ ವಾಹನದಲ್ಲಿ 20 ಜಿಲೆಟಿನ್ ಕಡ್ಡಿಗಳು ಹಾಗೂ ಸ್ಫೋಟಕ್ಕೆ ಬಳಸಲಾಗುವ ಸಾಮಗ್ರಿಗಳು ಕಳೆದ ಗುರುವಾರ ಕಂಡು ಬಂದಿದ್ದವು. ಮುಕೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ ಅವರನ್ನುದ್ದೇಶಿಸಿ ಕೈಬರಹದಲ್ಲಿ ಬರೆದ ಬೆದರಿಕೆ ಪತ್ರವೂ ಕಾರಿನಲ್ಲಿ ಪತ್ತೆಯಾಗಿತ್ತು.

ಇದು ಕಳ್ಳತನವಾದ ವಾಹನ ಎಂದು ನಂತರ ತನಿಖೆಯಿಂದ ಕಂಡುಕೊಂಡ ಪೊಲೀಸರು ಅದರ ಮಾಲಕ ವಿಖ್ರೊಲಿಯಲ್ಲಿ ವಾಸವಿರುವುದನ್ನೂ ಪತ್ತೆ ಹಚ್ಚಿದ್ದರು.

ಮಾಸ್ಕ್ ಹಾಗೂ ಹೂಡಿ ಧರಿಸಿದ ವ್ಯಕ್ತಿಯೊಬ್ಬ ಕಾರನ್ನು ಅಂಬಾನಿ ನಿವಾಸದ ಸಮೀಪ ಪಾರ್ಕ್ ಮಾಡುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆದರೆ ಆ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News