ಅರ್ನಬ್, ಕಂಗನಾ ವಿರುದ್ಧದ ಹಕ್ಕುಚ್ಯುತಿ ನೋಟಿಸ್ ಕುರಿತು ವರದಿ ಸಲ್ಲಿಸಲು ಸಮಿತಿಗೆ ನೀಡಲಾದ ಗಡು ವಿಸ್ತರಣೆ

Update: 2021-03-05 16:32 GMT

ಮುಂಬೈ, ಮಾ. 3: ಪತ್ರಕರ್ತ ಅರ್ನಬ್ ಗೋಸ್ವಾಮಿ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧದ ಹಕ್ಕುಚ್ಯುತಿ ನೋಟಿಸ್ ಕುರಿತು ವರದಿ ಸಲ್ಲಿಸಲು ಹಕ್ಕು ಚ್ಯುತಿ ಸಮಿತಿಗೆ ನೀಡಲಾದ ಕಾಲಾವಧಿಯನ್ನು ವಿಧಾನ ಸಭೆಯ ಮುಂದಿನ ಅಧಿವೇಶನದ ಕೊನೆಯ ದಿನದ ವರಗೆ ಮಹಾರಾಷ್ಟ್ರ ವಿಧಾನ ಸಭೆ ಶುಕ್ರವಾರ ವಿಸ್ತರಿಸಿದೆ.

ಹಕ್ಕುಚ್ಯುತಿ ಸಮಿತಿ ಅಧ್ಯಕ್ಷ ದೀಪಕ್ ಕೇಸರ್ಕರ್ ಅವರು ಅಂತಿಮ ಗಡು ವಿಸ್ತರಿಸುವ ಪ್ರಸ್ತಾವವನ್ನು ಮಂಡಿಸಿದರು. ಆಕ್ಷೇಪಾರ್ಹ ಹೇಳಿಕೆ ಕುರಿತಂತೆ ಗೋಸ್ವಾಮಿ ಹಾಗೂ ರಣಾವತ್ ಅವರ ವಿರುದ್ಧ ಶಿವಸೇನೆ ಶಾಸಕ ಪ್ರತಾಪ್ ಸರ್‌ನಾಕ್ ಹಕ್ಕುಚ್ಯುತಿ ನೋಟಿಸ್ ಪ್ರಸ್ತಾವವನ್ನು ವಿಧಾನ ಸಭೆ ಸ್ಪೀಕರ್ ಅವರ ಕಚೇರಿಯಲ್ಲಿ ಸೆಪ್ಟಂಬರ್ 7ರಂದು ಸಲ್ಲಿಸಿದ್ದರು.

ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿ ವರದಿ ಮಾಡುವ ಸಂದರ್ಭ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಇತರ ಸಚಿವರ ವಿರುದ್ಧ ಗೋಸ್ವಾಮಿ ಅವರು ನೀಡಿದ್ದ ಹೇಳಿಕೆ ಬಗ್ಗೆ ಸರ್‌ನಾಕ್ ಆಕ್ಷೇಪ ವ್ಯಕ್ತಪಡಿಸಿದ್ದರು. ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿರುವುದಕ್ಕೆ ಸಂಬಂಧಿಸಿ ರಣಾವತ್ ವಿರುದ್ಧ ಹಕ್ಕಚ್ಯುತಿ ನೋಟಿಸ್ ಜಾರಿಗೊಳಿಸಲಾಗಿತ್ತು. ಶಿವಸೇನೆ ಎಂಎಲ್‌ಸಿ ಮನಿಶಾ ಕಾಯಂಡೆ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಗೋಸ್ವಾಮಿ ವಿರುದ್ಧ ವಿಧಾನ ಪರಿಷತ್‌ನಲ್ಲಿ ಹಕ್ಕು ಚ್ಯುತಿಯನ್ನು ಕಳೆದ ವರ್ಷ ಸೆಪ್ಟಂಬರ್ 8ರಂದು ಮಂಡಿಸಿದ್ದರು. ಮುಂಬೈ ಹಾಗೂ ನಗರ ಪೊಲೀಸರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಅದೇ ದಿನ ಕಾಂಗ್ರೆಸ್ ಎಂಎಲ್‌ಸಿ ಅಶೋಕ್ ಅಲಿಯಾಸ್ ಭಾ ಜಗತಾಪ್ ಅವರು ರಣಾವತ್ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News