2016ರ ಗೋಪಾಲಗಂಜ್ ಕಳ್ಳಭಟ್ಟಿ ದುರಂತ: ಒಂದೇ ಕುಟುಂಬದ ಒಂಭತ್ತು ಮಂದಿಗೆ ಮರಣದಂಡನೆ

Update: 2021-03-05 17:10 GMT

ಹೊಸದಿಲ್ಲಿ,ಮಾ.5: ಬಿಹಾರದ ಗೋಪಾಲಗಂಜ್‌ನಲ್ಲಿ 2016ರಲ್ಲಿ ಸಂಭವಿಸಿದ್ದ ಕಳ್ಳಭಟ್ಟಿ ದುರಂತ ಪ್ರಕರಣದಲ್ಲಿ ಒಂಭತ್ತು ಜನರಿಗೆ ವಿಶೇಷ ಅಬಕಾರಿ ನ್ಯಾಯಾಲಯವು ಮರಣದಂಡನೆಯನ್ನು ವಿಧಿಸಿದೆ. ನಾಲ್ವರು ಮಹಿಳೆಯರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿರುವ ನ್ಯಾಯಾಲಯವು ಅವರಿಗೆ ತಲಾ 10 ಲ.ರೂ.ಗಳ ದಂಡವನ್ನೂ ವಿಧಿಸಿದೆ. ಎಲ್ಲ 13 ಜನರು ದೋಷಿಗಳು ಎಂದು ನ್ಯಾಯಾಲಯವು ಫೆ.26ರಂದು ಘೋಷಿಸಿತ್ತು. ಮರಣದಂಡನೆಗೆ ಗುರಿಯಾಗಿರುವ ಎಲ್ಲ ಒಂಭತ್ತು ಜನರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

2016ರ ಆಗಸ್ಟ್‌ನಲ್ಲಿ ಗೋಪಾಲಗಂಜ್ ಜಿಲ್ಲೆಯ ಖರ್ಜುರಬಾನಿ ಪ್ರದೇಶದಲ್ಲಿ ವಿಷಪೂರಿತ ಮದ್ಯವನ್ನು ಸೇವಿಸಿ ಕನಿಷ್ಠ 19 ಜನರು ಸಾವನ್ನಪ್ಪಿದ್ದರು ಮತ್ತು ಇತರ ಇಬ್ಬರು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದರು.

 2016ರ ಆರಂಭದಲ್ಲಿ ನಿತೀಶ್ ಕುಮಾರ ಸರಕಾರವು ರಾಜ್ಯಾದ್ಯಂತ ಪಾನ ನಿಷೇಧವನ್ನು ಜಾರಿಗೊಳಿಸಿದ ಬಳಿಕ ಇದು ಮೊದಲ ದೊಡ್ಡ ಕಳ್ಳಭಟ್ಟಿ ದುರಂತವಾಗಿತ್ತು. ಇದೇ ಪ್ರಕರಣದಲ್ಲಿ ಕಳೆದ ವರ್ಷದ ಜೂನ್‌ನಲ್ಲಿ ಮೂವರು ಎಸ್‌ಐಗಳು ಸೇರಿದಂತೆ 21 ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯ ಲೋಪಕ್ಕಾಗಿ ಸೇವೆಯಿಂದ ವಜಾಗೊಳಿಸಲಾಗಿತ್ತು.

ಬಿಹಾರದಲ್ಲಿ ಇದೇ ಮೊದಲ ಬಾರಿಗೆ ಒಂದೇ ಪ್ರಕರಣದಲ್ಲಿ ಇಷ್ಟೊಂದು ಜನರಿಗೆ ಮರಣದಂಡನೆಯನ್ನು ವಿಧಿಸಲಾಗಿದೆ ಎಂದು ಸರಕಾರಿ ವಕೀಲರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News