ಮಿರ್ವೈಝ್ ಉಮರ್ ಫಾರೂಕ್ ಗೃಹಬಂಧನವನ್ನು ಮುಂದುವರಿಸಿದ ಸರಕಾರ: ಹುರಿಯತ್ ಕಾನ್ಫರೆನ್ಸ್

Update: 2021-03-05 17:15 GMT

ಶ್ರೀನಗರ,ಮಾ.5: ತನ್ನ ಅಧ್ಯಕ್ಷ ಮಿರ್ವೈಝ್ ಉಮರ್ ಫಾರೂಕ್ ಅವರನ್ನು ಬಿಡುಗಡೆಗೊಳಿಸುವ ನಿರ್ಧಾರದಿಂದ ಸರಕಾರವು ಹಿಂದೆ ಸರಿದಿದೆ ಎಂದು ಹುರಿಯತ್ ಕಾನ್ಫರೆನ್ಸ್ ಶುಕ್ರವಾರ ತಿಳಿಸಿದೆ.

ಮಿರ್ವೈಝ್ ವಿರುದ್ಧ ಹೇರಲಾಗಿದ್ದ ನಿರ್ಬಂಧಗಳನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ಅವರ ನಿಕಟವರ್ತಿಯೋರ್ವರು ಗುರುವಾರ ತಿಳಿಸಿದ್ದರು. ಆದರೆ ಸರಕಾರವು ಇದನ್ನು ದೃಢಪಡಿಸಿರಲಿಲ್ಲ ಅಥವಾ ನಿರಾಕರಿಸಿರಲಿಲ್ಲ.

2019,ಆಗಸ್ಟ್‌ನಿಂದ ಗೃಹಬಂಧನದಲ್ಲಿರುವ ಮಿರ್ವೈಝ್ ಉಮರ್ ಫಾರೂಕ್ ಅವರ ಬಿಡುಗಡೆಯನ್ನು ಪ್ರಕಟಿಸಿದ ಬಳಿಕ ಸರಕಾರಿ ಅಧಿಕಾರಿಗಳು ತಮ್ಮ ನಿರ್ಧಾರವನ್ನು ಹಿಂದೆಗೆದುಕೊಂಡಿರುವುದಕ್ಕೆ ಹುರಿಯತ್ ಕಾನ್ಫರೆನ್ಸ್ ತೀವ್ರ ಅಸಮಾಧಾನ ಮತ್ತು ವಿಷಾದವನ್ನು ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ ಸಂಘಟನೆಯ ವಕ್ತಾರರು,ಪೊಲೀಸ್ ಅಧಿಕಾರಿಗಳು ಗುರುವಾರ ತಡರಾತ್ರಿ ಮಿರ್ವೈಝ್‌ರ ನಿವಾಸಕ್ಕೆ ಭೇಟಿ ನೀಡಿ ಗೃಹಬಂಧನವು ಮುಂದುವರಿಯುತ್ತದೆ ಮತ್ತು ಶುಕ್ರವಾರದ ನಮಾಝ್‌ಗಾಗಿ ಜಾಮಿಯಾ ಮಸೀದಿಗೆ ತೆರಳಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದರು. ಶುಕ್ರವಾರ ಬೆಳಿಗ್ಗೆಯಿಂದಲೇ ಮಿರ್ವೈಝ್ ನಿವಾಸದ ಹೊರಗೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ಆರೋಪಿಸಿದರು.

ಜಮ್ಮು-ಕಾಶ್ಮೀರದಲ್ಲಿ ಯಾರನ್ನೂ ಗೃಹಬಂಧನದಲ್ಲಿ ಇರಿಸಲಾಗಿಲ್ಲ ಎಂದು ಸಹಾಯಕ ಗೃಹಸಚಿವರು ಇತ್ತೀಚಿಗೆ ಸಂಸತ್ತಿನಲ್ಲಿ ಸ್ಪಷ್ಟವಾಗಿ ತಿಳಿಸಿದ್ದರು. ಹಾಗಿದ್ದರೆ ಮಿರ್ವೈಝ್‌ರ ಬಂಧನವನ್ನು ಮುಂದುವರಿಸಿದ್ದೇಕೆ ಎಂದು ಪ್ರಶ್ನಿಸಿದ ವಕ್ತಾರರು,ಭರವಸೆಯನ್ನು ಕಳೆದುಕೊಳ್ಳದಂತೆ ಮತ್ತು ಯಾವುದೇ ರೂಪದ ಹಿಂಸಾತ್ಮಕ ಪ್ರತಿಭಟನೆಗಿಳಿಯದಂತೆ ಜನತೆಯನ್ನು ಕೋರಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News