100ನೇ ದಿನದತ್ತ ರೈತರ ಪ್ರತಿಭಟನೆ: ಶನಿವಾರ ದಿಲ್ಲಿಯ ಪ್ರಮುಖ ಎಕ್ಸ್‌ಪ್ರೆಸ್ ವೇ ಬಂದ್

Update: 2021-03-05 17:28 GMT

ಹೊಸದಿಲ್ಲಿ, ಮಾ. 5: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಕೆಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆಯ 100ನೇ ದಿನವಾದ ಶನಿವಾರ ಹೊಸದಿಲ್ಲಿಯ ಹೊರವಲಯದ ಪ್ರಮುಖ ಎಕ್ಸ್‌ಪ್ರೆಸ್ ವೇಯನ್ನು ತಡೆಯಲು ನಿರ್ಧರಿಸಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ದಿಲ್ಲಿಯ ಹೊರವಲಯದಲ್ಲಿ ಕಳೆದ ಡಿಸೆಂಬರ್‌ನಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದಿಲ್ಲಿಯ ಹೊರವಲಯದ ವರ್ತುಲವಾಗಿ ರೂಪುಗೊಂಡಿರುವ ಪಶ್ಚಿಮ ಹೊರ ಎಕ್ಸ್‌ಪ್ರೆಸ್‌ವೇಯ 6 ರಸ್ತೆಗಳಲ್ಲಿ ಎಲ್ಲಾ ಸಂಚಾರವನ್ನು 6 ಗಂಟೆಗಳ ಕಾಲ ತಡೆಯಲು ಉತ್ತರದ ರಾಜ್ಯಗಳಾದ ಪಂಜಾಬ್, ಹರ್ಯಾಣ ಹಾಗೂ ಉತ್ತರಪ್ರದೇಶದ ರೈತರು ನಿರ್ಧರಿಸಿದ್ದಾರೆ ಎಂದು ರೈತ ಒಕ್ಕೂಟದ ನಾಯಕರು ಶುಕ್ರವಾರ ತಿಳಿಸಿದ್ದಾರೆ.

‘‘ಹವಾಮಾನ ಕೂಡ ಹದಗೆಡುತ್ತಿರುವುದರಿಂದ 100 ದಿನಗಳ ನಂತರ ಚಳವಳಿ ನಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಕೇಂದ್ರ ಸರಕಾರದ ಮೇಲೆ ನೈತಿಕ ಒತ್ತಡ ಹೇರಬೇಕು ಎಂಬುದು ನಮ್ಮ ಭಾವನೆ’’ ಎಂದು ರೈತರ ಒಕ್ಕೂಟದ ವಕ್ತಾರ ದರ್ಶನ್ ಪಾಲ್ ಹೇಳಿದ್ದಾರೆ. ಇದು ಸರಕಾರವನ್ನು ದುರ್ಬಲಗೊಳಿಸಲಿದೆ ಹಾಗೂ ಕೇಂದ್ರ ಸರಕಾರ ನಮ್ಮೊಂದಿಗೆ ಮತ್ತೊಮ್ಮೆ ಮಾತುಕತೆಗೆ ಕುಳಿತುಕೊಳ್ಳುವಂತೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಈ ತಿಂಗಳು ಕೊಯ್ಲು ಆರಂಭವಾಗುತ್ತಿದ್ದಂತೆ ಗೆಳೆಯರು ಹಾಗೂ ನೆರೆಯವರು ಗ್ರಾಮಕ್ಕೆ ಹಿಂದಿರುಗಿ ಹೊಲದಲ್ಲಿ ಕೊಯ್ಲಿಗೆ ನರೆವಾಗಲಿದ್ದಾರೆ. ತಾನು ಹಾಗೂ ಇತರ ರೈತರು ಪ್ರತಿಭಟನೆ ಮುಂದುವರಿಸಲಿದ್ದೇವೆ ಎಂದು ಪಾಲ್ ತಿಳಿಸಿದ್ದಾರೆ. ದಿಲ್ಲಿಯಲ್ಲಿ ಬೇಸಗೆಯಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಲಿದೆ. ಆದರೆ, ಇದು ನಮ್ಮ ಚಳವಳಿಗೆ ಅಡ್ಡಿಯಾಗದು ಎಂದು ಅವರು ಹೇಳಿದ್ದಾರೆ. ‘‘ಈ ಕಾನೂನು ನಮಗೆ ಡೆತ್ ವಾರಂಟ್‌ನಂತೆ. ನಾವು ದೀರ್ಘ ಕಾಲ ಪ್ರತಿಭಟನೆ ಮುಂದುವರಿಸಲು ಸಿದ್ಧರಾಗಿದ್ದೇವೆ’’ ದರ್ಶನ್ ಪಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News