ಚಿನ್ನ ಅಕ್ರಮ ಸಾಗಾಟ ಪ್ರಕರಣದಲ್ಲಿ ಕೇರಳ ಸಿಎಂ, ಸ್ಪೀಕರ್ ಪಾತ್ರವಿರುವುದಾಗಿ ಸ್ವಪ್ನಾ ಸುರೇಶ್ ಆರೋಪ

Update: 2021-03-05 17:48 GMT

ತಿರುವನಂತಪುರಂ, ಮಾ.5: ಚಿನ್ನ ಮತ್ತು ಕರೆನ್ಸಿ ಸ್ಮಗ್ಲಿಂಗ್ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ವಿಧಾನಸಭೆಯ ಸ್ಪೀಕರ್ ಅವರ ಪಾತ್ರವಿರುವ ಬಗ್ಗೆ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ತಿಳಿಸಿರುವುದಾಗಿ ಸೀಮಾಸುಂಕ (ಕಸ್ಟಮ್ಸ್) ಇಲಾಖೆ ಕೇರಳ ಹೈಕೋರ್ಟ್‌ಗೆ ಶುಕ್ರವಾರ ಮಾಹಿತಿ ನೀಡಿದೆ.

ಕಸ್ಟಮ್ಸ್ ಆಯುಕ್ತ ಸುಮಿತ್ ಕುಮಾರ್ ಹೈಕೋರ್ಟ್‌ಗೆ ಹೇಳಿಕೆಯನ್ನು ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಶಾಮೀಲಾಗಿರುವ ಪ್ರಭಾವೀ ವ್ಯಕ್ತಿಗಳ ಬಗ್ಗೆ ಬಾಯಿ ಬಿಡದಂತೆ ಆರೋಪಿ ಸ್ವಪ್ನಾ ಸುರೇಶ್‌ಗೆ ಜೈಲಿನಲ್ಲಿ ಬೆದರಿಕೆ ಒಡ್ಡಲಾಗಿದೆ ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಆರೋಪಿ ಸ್ವಪ್ನಾ ಸುರೇಶ್ ಅವರ 108ನೇ ಹೇಳಿಕೆ ಮತ್ತು 164ನೇ ಹೇಳಿಕೆಯು ಈ ಪ್ರಕರಣದಲ್ಲಿ ಮುಖ್ಯಮಂತ್ರಿ, ವಿಧಾನಸಭೆಯ ಸ್ಪೀಕರ್ ಹಾಗೂ ಸಚಿವ ಸಂಪುಟದ ಹಲವು ಸದಸ್ಯರು ಶಾಮೀಲಾಗಿರುವ ಬಗ್ಗೆ ಆಘಾತಕಾರಿ ವಿವರ ಒದಗಿಸಿದೆ. ಯುಎಇಯ ಈ ಹಿಂದಿನ ಕಾನ್ಸುಲ್ ಜನರಲ್‌ರೊಂದಿಗೆ ವಿಜಯನ್‌ಗಿದ್ದ ನಿಕಟ ಸಂಪರ್ಕ ಹಾಗೂ ಅಕ್ರಮ ಹಣದ ವಹಿವಾಟಿನ ಬಗ್ಗೆ ಸ್ವಪ್ನಾ ಸುರೇಶ್ ಮಾಹಿತಿ ನೀಡಿದ್ದಾರೆ ಎಂದು ಕಸ್ಟಮ್ಸ್ ಇಲಾಖೆ ಹೇಳಿದೆ.

ಸಿಎಂ ಮತ್ತು ಸ್ಪೀಕರ್ ಸೂಚನೆಯಂತೆ ಕಾನ್ಸುಲೇಟ್ ನೆರವು ಪಡೆದು ಚಿನ್ನ ಮತ್ತು ವಿದೇಶಿ ಕರೆನ್ಸಿಯನ್ನು ಸ್ಮಗ್ಲಿಂಗ್ ಮಾಡಲಾಗಿದೆ ಎಂದು ತಿಳಿಸಿರುವ ಸ್ವಪ್ನಾ, ಸ್ಪೀಕರ್ ಹಾಗೂ ಮೂವರು ಸಚಿವರು ನಡೆಸಿರುವ ಕಾನೂನು ಬಾಹಿರ ಕಾರ್ಯಗಳ ಬಗ್ಗೆ ತಿಳಿಸಿದ್ದಾರೆ. ಹಲವು ವ್ಯವಹಾರಗಳಿಂದ ಉನ್ನತ ಅಧಿಕಾರಿಗಳು ಕಿಕ್‌ಬ್ಯಾಕ್(ಲಂಚ) ಪಡೆದಿರುವ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. ತಾನು ಅರೆಬಿಕ್ ಭಾಷೆಯನ್ನು ಚೆನ್ನಾಗಿ ಬಲ್ಲವಳಾದ್ದರಿಂದ ಮೇಲೆ ತಿಳಿಸಿದ ವ್ಯಕ್ತಿಗಳು ಹಾಗೂ ಮಧ್ಯಪ್ರಾಚ್ಯ ಮೂಲದ ವ್ಯಕ್ತಿಯ ಪ್ರಮುಖ ವ್ಯವಹಾರಗಳಲ್ಲಿ ದುಬಾಷಿಯಾಗಿ (ಭಾಷಾಂತರಕಾರ್ತಿಯಾಗಿ) ಕಾರ್ಯ ನಿರ್ವಹಿಸಿದ್ದೇನೆ ಎಂದು ಸಪ್ನಾ ಹೇಳಿದ್ದಾರೆ. ಅಲ್ಲದೆ ಸ್ಮಗ್ಲಿಂಗ್ ಪ್ರಕರಣದಲ್ಲಿ ಮಾಜಿ ಪ್ರಧಾನ ಕಾರ್ಯದರ್ಶಿ (ಎಂ. ಶಿವಶಂಕರ್), ಕೇರಳದ ಪ್ರಭಾವೀ ರಾಜಕಾರಣಿಗಳು, ಉನ್ನತ ಅಧಿಕಾರಿಗಳು , ಯುಎಇ ಕಾನ್ಸುಲೇಟ್ ಕಚೇರಿಯ ಅಧಿಕಾರಿಗಳ ಪಾತ್ರ, ರಾಜ್ಯ ಸರಕಾರದ ಹಲವು ಯೋಜನೆಗಳ ಕಾಮಗಾರಿಯಲ್ಲಿ ಅಕ್ರಮ ಹಣದ ವ್ಯವಹಾರದ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News