ಪಶ್ಚಿಮ ಬಂಗಾಳ ಚುನಾವಣೆ: ಟಿಎಂಸಿ ಸ್ಟಾರ್ ಅಭ್ಯರ್ಥಿಗಳಿವರು....

Update: 2021-03-06 04:53 GMT
ಮನೋಜ್ ತಿವಾರಿ (Photo: PTI), ಅದಿತಿ ಮುನ್ಷಿ(Photo: @aditiofficial.page)

ಕೊಲ್ಕತ್ತಾ, ಮಾ.6: ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಟಿಎಂಸಿಯಿಂದ ಸ್ಪರ್ಧಿಸುವ ಎಲ್ಲ 291 ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಡುಗಡೆ ಮಾಡಿದ್ದು, ಯುವಕರು, ಅಲ್ಪಸಂಖ್ಯಾತರು, ಮಹಿಳೆಯರು, ಹಿಂದುಳಿದ ವರ್ಗದವರು ಹಾಗೂ ಹಲವು ಮಂದಿ ಚಿತ್ರತಾರೆಯರು ಹಾಗೂ ಕ್ರೀಡಾಪಟುಗಳಿಗೆ ಸ್ಥಾನ ಕಲ್ಪಿಸಿದ್ದಾರೆ.

"ಈ ಬಾರಿ ನಾವು ಯುವಮುಖಗಳು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಹಾಲಿ ಶಾಸಕರ ಪೈಕಿ 23-24 ಮಂದಿಗೆ ಟಿಕೆಟ್ ನಿರಾಕರಿಸಲಾಗಿದೆ. ಪಟ್ಟಿಯಲ್ಲಿ 50 ಮಹಿಳೆಯರು, 42 ಮುಸ್ಲಿಮರು, 79 ಮಂದಿ ಪರಿಶಿಷ್ಟ ಜಾತಿ, 17 ಮಂದಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಸೇರಿದ್ದಾರೆ" ಎಂದು ಮಮತಾ ಪ್ರಕಟಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ತಾರೆಗಳಲ್ಲಿ ಕ್ರಿಕೆಟಿಗ ಮನೋಜ್ ತಿವಾರಿ ಸೇರಿದ್ದಾರೆ. ಇತ್ತೀಚೆಗೆ  ಟಿಎಂಸಿ ಸೇರಿದ್ದ ಇವರು ಶಿಬ್‌ಪುರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳವನ್ನು ಪ್ರತಿನಿಧಿಸಿದ್ದ ಅವರು ಕೊಲ್ಕತ್ತಾ ನೈಟ್‌ರೈಡರ್ಸ್‌, ಕಿಂಗ್ಸ್ 11 ಪಂಜಾಬ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಪರ ಐಪಿಎಲ್‌ನಲ್ಲಿ ಆಡಿದ್ದಾರೆ.

ಕನಮಚಿ, ಏಕ್ಲಾ ಚೋಲೊ, ರಾಜಕಹಾನಿ ಮತ್ತಿತರ ಬಂಗಾಳಿ ಚಿತ್ರಗಳಿಂದ ಜನಪ್ರಿಯರಾಗಿರುವ ನಟಿ ಸಾಯೋನಿ ಘೋಷಿ ಅಸನ್ಸೋಲ್ ದಕ್ಷಿಣ ಕ್ಷೇತ್ರದ ಅಭ್ಯರ್ಥಿ. 2009ರ 'ಇಚ್ಛೇ ದಿನ' ಟಿವಿ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ್ದ 28 ವರ್ಷದ ಈ ಬೆಡಗಿ ‘ಪ್ರೊಲೋಯ್ ಆಶ್ಚೆ’ ಧಾರಾವಾಹಿಯಲ್ಲೂ ನಟಿಸಿದ್ದರು.

ಮತ್ತೊಬ್ಬ ಸ್ಟಾರ್ ಅಭ್ಯರ್ಥಿ ನಟ-ನಿರ್ದೇಶಕ ರಾಜ್ ಚಕ್ರವರ್ತಿ(46) ಕೊಲ್ಕತ್ತಾದ ಬರಾಕ್‌ಪುರ ಕ್ಷೇತ್ರದ ಸ್ಪರ್ಧಿ. ಬೆಂಗಾಲಿ ಟಿವಿ ಉದ್ಯಮದಲ್ಲಿ ಜನಪ್ರಿಯರಾಗಿರುವ ಇವರು ಚಾಲೆಂಜ್ ಮತ್ತು ಪರಿಣೀತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಜ್ಯೂನ್ ಮಲಿಯಾ
ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಜೂನ್ ಮಲಿಯಾ ಜನಪ್ರಿಯ ಬೆಂಗಾಲಿ ನಟಿ ಹಾಗೂ ಹಲವು ಚಿತ್ರ ಹಾಗೂ ಟಿವಿ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ. 1996ರಲ್ಲಿ ಲಾಠಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ 50 ವರ್ಷ ವಯಸ್ಸಿನ ನಟಿ ಬಾಂಗ್ ಕನೆಕ್ಷನ್ ಮತ್ತು ಮೇರಿ ಪ್ಯಾರಿ ಬಿಂದು ಚಿತ್ರಗಳಲ್ಲೂ ನಟಿಸಿದ್ದಾರೆ. ಮೇದಿನಿಪುರ ಕ್ಷೇತ್ರದಿಂದ ಇವರು ಅದೃಷ್ಟ ಪರೀಕ್ಷಿಸುತ್ತಿದ್ದಾರೆ.

100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸೋಹಮ್ ಚಕ್ರವರ್ತಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. 2016ರ ಚುನಾವಣೆಯಲ್ಲಿ ಬರ್ಜೋರಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವ ಅನುಭವಿಸಿದ್ದ ಇವರು ಈ ಬಾರಿ ಚಂಡೀಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಜನತಾ ಎಕ್ಸ್‌ಪ್ರೆಸ್ ಜನಪ್ರಿಯ ಕಾರ್ಯಕ್ರಮದ ಸ್ಟಾರ್ ಕಾಂಚನ್ ಮಲಿಕ್, ರಿಯಾಲಿಟಿ ಶೋ ಮೂಲಕ ಜನಪ್ರಿಯರಾದ ಸಾಯಂತಿಕಾ ಬ್ಯಾನರ್ಜಿ, ಜೋಲ್ ಮೈತ್ರಾ ಖ್ಯಾತಿಯ ಲವ್ಲಿ ಮೈತ್ರಾ, ಗಾಯಕಿ ಅದಿತಿ ಮುನ್ಷಿ, ಚಿರಂಜೀತ್ ಚಕ್ರವರ್ತಿ, ಬಿರ್ಬಾಹ ಹಂಸದ, ಹಿರಿಯ ನಟ ಬಿದೋಶ್ ಬೋಸ್ ಕಣದಲ್ಲಿರುವ ಇತರ ತಾರೆಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News