×
Ad

ಲಸಿಕೆಯ ಪ್ರಮಾಣಪತ್ರದಿಂದ ಪ್ರಧಾನಿ ಫೋಟೊ ತೆಗೆಯಲು ಕೇಂದ್ರಕ್ಕೆ ಚುನಾವಣಾ ಆಯೋಗ ಸೂಚನೆ

Update: 2021-03-06 10:51 IST

ಹೊಸದಿಲ್ಲಿ: ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಆರಂಭವಾಗಲು ಕೆಲವೇ ವಾರಗಳು ಬಾಕಿ ಉಳಿದಿರುವಾಗ ಚುನಾವಣಾ ಆಯೋಗವು ಚುನಾವಣೆ ನಡೆಯಲಿರುವ  ರಾಜ್ಯಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೊ ಇರುವ ಕೊರೋನ ಲಸಿಕೆಯ ಪ್ರಮಾಣಪತ್ರವನ್ನುತೆಗೆದು ಹಾಕುವಂತೆ  ಸರಕಾರಕ್ಕೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಐದು ರಾಜ್ಯಗಳಲ್ಲಿ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ಈ ವಾರಾರಂಭದಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ವಿತರಿಸುತ್ತಿರುವ ಕೊರೋನ ಲಸಿಕೆಯ ಪ್ರಮಾಣಪತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಫೋಟೊಗಳಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಆರೋಗ್ಯ ಸಚಿವಾಲಯವು ವೈದ್ಯರು, ದಾದಿಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸಲ್ಲಬೇಕಾದ ಶ್ರೇಯಸನ್ನು  ಕಸಿದುಕೊಂಡಿದೆ. ರಾಜ್ಯದಲ್ಲಿ ಪ್ರಧಾನಮಂತ್ರಿ ಅಧಿಕೃತ ಸರಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿತ್ತು.

ಈ ವಿಚಾರಕ್ಕೆ ಸಂಬಂಧಿಸಿ ಮೊದಲಿಗೆ ಪಶ್ಚಿಮಬಂಗಾಳದ ಚುನಾವಣಾ ಅಧಿಕಾರಿಯಿಂದ ವರದಿಯನ್ನು ಕೋರಿದ್ದ ಚುನಾವಣಾ ಆಯೋಗವು ಪ್ರಧಾನಿ ಫೋಟೊಗಳನ್ನು ತೆಗೆದುಹಾಕುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ. 

ಚುನಾವಣೆ ನಡೆಯಲಿರುವ ಪಂಚರಾಜ್ಯಗಳಲ್ಲಿ ಲಸಿಕೆಯ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಮೋದಿಯವರ ಫೋಟೊ ಕಾಣಿಸದಂತೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸರಕಾರಕ್ಕೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಇತರ ರಾಜ್ಯಗಳಲ್ಲಿ ನೀಡುವ ಕೊರೊನ ಲಸಿಕೆಯ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಫೋಟೊ  ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News