ತಮಿಳುನಾಡು ಚುನಾವಣೆ: ಬಿಜೆಪಿಗೆ 20 ಸೀಟುಗಳನ್ನು ಬಿಟ್ಟುಕೊಟ್ಟ ಎಐಎಡಿಎಂಕೆ

Update: 2021-03-06 17:37 GMT

ಚೆನ್ನೈ,ಮಾ.6: ನಾಲ್ಕು ಸುತ್ತಿನ ಮಾತುಕತೆಗಳ ಬಳಿಕ ಎಐಎಡಿಎಂಕೆ ಮತ್ತು ಬಿಜೆಪಿ ತಮಿಳುನಾಡು ವಿಧಾನಸಭಾ ಚುನಾವಣೆಗಾಗಿ ಸ್ಥಾನ ಹಂಚಿಕೆ ಒಪ್ಪಂದವನ್ನು ಅಂತ್ಯಗೊಳಿಸಿವೆ. ಎಐಎಡಿಎಂಕೆ ಬಿಜೆಪಿಗೆ 20 ವಿಧಾನಸಭಾ ಕ್ಷೇತ್ರಗಳ ಜೊತೆಗೆ ಲೋಕಸಭಾ ಉಪಚುನಾವಣೆ ನಡೆಯಲಿರುವ ಕನ್ಯಾಕುಮಾರಿ ಕ್ಷೇತ್ರವನ್ನೂ ನೀಡಿದೆ.

ಶುಕ್ರವಾರ ತಡರಾತ್ರಿ ಅಂತಿಮಗೊಂಡ ಒಪ್ಪಂದಕ್ಕೆ ಎಐಎಡಿಎಂಕೆ ಸಂಚಾಲಕ ಹಾಗೂ ಉಪಮುಖ್ಯಮಂತ್ರಿ ಒ.ಪನ್ನೀರಸೆಲ್ವಂ,ಜಂಟಿ ಸಂಚಾಲಕ ಮತ್ತು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ,ಬಿಜೆಪಿಯ ರಾಜ್ಯ ಉಸ್ತುವಾರಿ ಸಿ.ಟಿ.ರವಿ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಎಲ್.ಮುರುಗನ್ ಅವರು ಅಂಕಿತಗಳನ್ನು ಹಾಕಿದ್ದಾರೆ.

ನಟ ವಿಜಯಕಾಂತ ಅವರ ಡಿಎಂಡಿಕೆ ಜೊತೆಗೆ ಸ್ಥಾನ ಹಂಚಿಕೆಯನ್ನು ಎಐಎಡಿಎಂಕೆ ಇನ್ನಷ್ಟೇ ಅಂತಿಮಗೊಳಿಸಬೇಕಿದೆ.

ಶುಕ್ರವಾರ ಎಐಎಡಿಎಂಕೆ ತನ್ನ ಆರು ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆಗೊಳಿಸಿದ್ದು,ಪಳನಿಸ್ವಾಮಿ ಅವರು ಎಡಪ್ಪಾಡಿ ಮತ್ತು ಪನ್ನೀರಸೆಲ್ವಂ ಅವರು ಬೋದಿನಾಯಗನೂರು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.

ತಮಿಳುನಾಡು ವಿಧಾನಭಾ ಚುನಾವಣೆಗಾಗಿ ಎ.6ರಂದು ಏಕಹಂತದಲ್ಲಿ ಮತದಾನ ನಡೆಯಲಿದ್ದು,ಮೇ 2ರಂದು ಮತಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News