ವಿಶ್ವಾಸಮತ ಯಾಚನೆಯಲ್ಲಿ ಜಯಗಳಿಸಿದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್

Update: 2021-03-06 16:53 GMT
photo: twitter

ಇಸ್ಲಾಮಾಬಾದ್,ಮಾ.6: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಶನಿವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಂಡಿಸಿದ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಪ್ರತಿಪಕ್ಷಗಳು ಕಲಾಪವನ್ನು ಬಹಿಷ್ಕರಿಸಿದ್ದವು. ಇತ್ತೀಚೆಗೆ ತೀವ್ರ ಜಿದ್ದಾಜಿದ್ದಿ ಯೊಂದಿಗೆ ನಡೆದ ಸೆನೆಟ್ ಚುನಾವಣೆಗಳಲ್ಲಿ ಪಾಕ್ ವಿತ್ತ ಸಚಿವ ಅಬ್ದುಲ್ ಹಾಫೀಝ್ ಶೇಖ್ ಸೋಲನು ಭವಿಸಿದ್ದರಿಂದ ಮುಜುಗರಕ್ಕೀಡಾಗಿದ್ದ ಇಮ್ರಾನ್ ಸರಕಾರಕ್ಕೆ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿರುವುದು ಹೊಸ ಹುರುಪು ನೀಡಿದೆ.

 ಪಾಕ್ ಅಧ್ಯಕ್ಷ ಆರೀಫ್ ಅಲ್ವಿ ಅವರ ಆದೇಶದ ಮೇಲೆ ಇಂದು ಕರೆಯಲಾಗಿದ್ದ 342 ಸದಸ್ಯ ಬಲದ ಪಾಕ್ ಸಂಸತ್‌ನ ವಿಶೇಷ ಅಧಿವೇಶನದಲ್ಲಿ ವಿಶ್ವಾಸ ಮತ ನಿರ್ಣಯವನ್ನು ಮಂಡಿಸಲಾಗಿದ್ದು, ಇಮ್ರಾನ್ ಖಾನ್ 178 ಮತಗಳನ್ನು ಪಡೆದರು. ಸಂಸತ್‌ನಲ್ಲಿ ಬಹುಮತಕ್ಕೆ 172 ಮತಗಳ ಅಗತ್ಯವಿದೆ.

11 ಪಕ್ಷಗಳ ಮೈತ್ರಿಕೂಟವಾದ ಪಾಕಿಸ್ತಾನ ಡೆಮಾಕ್ರಾಟಿಕ್ ಮೂವ್‌ಮೆಂಟ್ (ಪಿಡಿಎಂ) ಒಕ್ಕೂಟವು ಮತದಾನವನ್ನು ಬಹಿಷ್ಕರಿಸಿತು.

 ಬುಧವಾರ ನಡೆದ ಸೆನೆಟ್‌ಚುನಾವಣೆಯಲ್ಲಿ ತನ್ನ ಸಂಪುಟದ ವಿತ್ತ ಸಚಿವ ಅಬ್ದುಲ್ ಹಾಫೀಝ್ ಶೇಖ್ ಅವರು ಸೋಲನುಭವಿಸಿದ ಬಳಿಕ ಇಮ್ರಾನ್ ಖಾನ್ ಅವರು ಪಾಕ್ ಸಂಸತ್‌ನಲ್ಲಿ ವಿಶ್ವಾಸಮತ ಯಾಚಿಸಲು ನಿರ್ಧರಿಸಿದ್ದರು. ಸೆನೆಟ್ ಚುನಾವಣೆಯಲ್ಲಿ ವಿತ್ತ ಸಚಿವರ ಪರಾಭವದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು.

ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರು ವಿಶ್ವಾಸಮತ ನಿರ್ಣಯವನ್ನು ಸದನದಲ್ಲಿ ಮಂಡಿಸಿದು. ತೆಹ್ರೆಕೆ ಇನ್ಸಾಫ್ ಪಕ್ಷದ ನೇತೃತ್ವದ ಆಡಳಿತ ಮೈತ್ರಿಕೂಟದಲ್ಲಿ 181 ಸದಸ್ಯರಿದ್ದಾರೆ. ಆದರೆ ಸಂಸದ ಫೈಸಲ್ ವೊವ್ಡಾ ಅವರ ರಾಜೀನಾಮೆಯ ಬಳಿಕ ಅಡಳಿತ ಮೈತ್ರಿಕೂಟದ ಬಲ 180ಕ್ಕೆ ಇಳಿದಿದೆ.

ತೆಹ್ರಿಕೆ ಇನ್ಸಾಫ್ ನೇತೃತ್ವದ ಮೈತ್ರಿಕೂಟದ ಪಾಲುದಾರ ಪಕ್ಷಗಳಾದ ಎಂಕ್ಯೂಎಂ, ಪಿಎಲ್‌ಎಲ್‌ಕ್ಯೂ ಹಾಗೂ ಜಿಡಿಎ ಕೂಡಾ ಇಮ್ರಾನ್‌ಗೆ ಬೆಂಬಲ ಘೋಷಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News