ಚೊಚ್ಚಲ ಟೆಸ್ಟ್ ಪಂದ್ಯ ಆಡಿ 50 ವರ್ಷ: ಸುನೀಲ್ ಗವಾಸ್ಕರ್‌ಗೆ ಬಿಸಿಸಿಐ ಗೌರವ

Update: 2021-03-06 14:33 GMT

ಅಹಮದಾಬಾದ್, ಮಾ.6: ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿ 50 ವರ್ಷ ಪೂರೈಸಿದ್ದ ಭಾರತದ ಮಾಜಿ ನಾಯಕ ಹಾಗೂ ಬ್ಯಾಟಿಂಗ್ ಲೆಜೆಂಡ್ ಸುನೀಲ್ ಗವಾಸ್ಕರ್‌ಗೆ ಶನಿವಾರ ಬಿಸಿಸಿಐ ಗೌರವಿಸಿದೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ನ ಮೂರನೇ ದಿನವಾದ ಶನಿವಾರ ಭೋಜನ ವಿರಾಮದ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ ಶಾ ಅವರು 71ರ ವಯಸ್ಸಿನ ಗವಾಸ್ಕರ್‌ಗೆ ಟೆಸ್ಟ್ ಕ್ಯಾಪ್‌ನ್ನು ಸ್ಮರಣಿಕೆಯಾಗಿ ನೀಡಿದರು.

ಮಾಜಿ ಟೆಸ್ಟ್ ನಾಯಕ, ಬ್ಯಾಟಿಂಗ್ ದಂತಕತೆ ಸುನೀಲ್ ಗವಾಸ್ಕರ್ ಇಂದು ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿ 50 ವರ್ಷ ತುಂಬಿದೆ ಎಂದು ಬಿಸಿಸಿಐ ಟ್ವೀಟಿಸಿದೆ.

ಸರಳ ಸಮಾರಂಭದ ಚಿತ್ರಗಳನ್ನು ಶಾ ಅವರು ತನ್ನ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಹಾಕಿಕೊಂಡಿದ್ದಾರೆ.

ಹಿರಿಯ ಕ್ರಿಕೆಟಿಗ ಗವಾಸ್ಕರ್ 1971ರಿಂದ 1981ರ ನಡುವೆ 125 ಟೆಸ್ಟ್, 108 ಏಕದಿನ ಪಂದ್ಯಗಳನ್ನಾಡಿದ್ದರು. ಟೆಸ್ಟ್ ಹಾಗೂ ಏಕದಿನದಲ್ಲಿ ಕ್ರಮವಾಗಿ 10,122 ಹಾಗೂ 3,092 ರನ್ ಗಳಿಸಿದ್ದಾರೆ. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ. 2005ರಲ್ಲಿ ಸಚಿನ್ ತೆಂಡುಲ್ಕರ್ ದಾಖಲೆ ಮುರಿಯುವ ತನಕ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕಗಳನ್ನು ಸಿಡಿಸಿದ್ದ ದಾಖಲೆ ಹೊಂದಿದ್ದರು.

 1971ರ ಮಾರ್ಚ್ 6ರಂದು ವೆಸ್ಟ್‌ಇಂಡೀಸ್ ವಿರುದ್ಧ ಗವಾಸ್ಕರ್ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. ಎರಡೂ ಇನಿಂಗ್ಸ್‌ನಲ್ಲಿ ಅರ್ಧಶತಕವನ್ನು ಸಿಡಿಸಿ ಗಮನ ಸೆಳೆದಿದ್ದರು. ಮೊದಲ ಇನಿಂಗ್ಸ್‌ನಲ್ಲಿ 65 ರನ್ ಗಳಿಸಿದ್ದ ಗವಾಸ್ಕರ್ ಅವರು ಎರಡನೇ ಇನಿಂಗ್ಸ್‌ನಲ್ಲಿ 67 ರನ್ ಗಳಿಸಿದ್ದರು. ಆ ಪಂದ್ಯವನ್ನು ಭಾರತವು 7 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News