ಆಂಧ್ರ: ಪೊಲೀಸ್ ಮಾಹಿತಿದಾರನೆಂಬ ಶಂಕೆಯಲ್ಲಿ ವ್ಯಕ್ತಿಯ ಹತ್ಯೆಗೈದ ಮಾವೋವಾದಿಗಳು

Update: 2021-03-06 18:05 GMT

ವಿಶಾಖಪಟ್ಟಣಂ, ಮಾ.6: ತಮ್ಮ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ಮಾವೋವಾದಿ ಕಾರ್ಯಕರ್ತರು ಹತ್ಯೆಗೈದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಮೃತ ವ್ಯಕ್ತಿಯನ್ನು ಬುಡಕಟ್ಟು ಸಮುದಾಯದ ಕೊರ್ರಾ ಪಿಲುಕು ಎಂದು ಗುರುತಿಸಲಾಗಿದೆ. ಪಿಲುಕು ಈ ಹಿಂದೆ ಮಾವೋವಾದಿ ಉಗ್ರರ ತಂಡದಲ್ಲಿದ್ದು ಎರಡು ವರ್ಷದ ಹಿಂದೆ ಪೊಲೀಸರಿಗೆ ಶರಣಾಗಿ ಮುಖ್ಯವಾಹಿನಿಗೆ ಮರಳಿದ್ದ. ಈತ ಪೊಲೀಸ್ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದಾನೆಂದು ಮಾವೋವಾದಿ ಉಗ್ರರಿಗೆ ಶಂಕೆಯಿತ್ತು. ಆಂಧ್ರ-ಒಡಿಶಾದ ಗಡಿಭಾಗದ ಜಿಕೆ ವೀಧಿ ಬ್ಲಾಕ್‌ನ ಬುಡಕಟ್ಟು ಗ್ರಾಮ ಕೊಥಪಾಳಂನಲ್ಲಿರುವ ಪಿಲುಕು ಮನೆಗೆ ಶುಕ್ರವಾರ ರಾತ್ರಿ ನುಗ್ಗಿದ ಮಾವೋವಾದಿಗಳ ತಂಡವೊಂದು ಪತ್ನಿ ಮತ್ತು ಮಕ್ಕಳ ಎದುರೇ ಪಿಲುಕು ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿದೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಪಿಲುಕು ಪೊಲೀಸರಿಗೆ ಮಾಹಿತಿ ನೀಡುವುದನ್ನು ಮುಂದುವರಿಸಿದ್ದರಿಂದ ಆತನನ್ನು ಕೊಲ್ಲಬೇಕಾಯಿತು ಎಂದು ಮಾವೋವಾದಿಗಳು ಹೇಳಿರುವುದಾಗಿ ಪಿಲುಕು ಪತ್ನಿ ಪೊಲೀಸರಿಗೆ ತಿಳಿಸಿದ್ದಾಳೆ. ಆದರೆ ಇದನ್ನು ಪೊಲೀಸರು ನಿರಾಕರಿಸಿದ್ದಾರೆ.

ಕಳೆದ ತಿಂಗಳು ನಡೆದಿದ್ದ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವಂತೆ ಮಾವೋವಾದಿಗಳು ಬುಡಕಟ್ಟು ಸಮುದಾಯದವರನ್ನು ಎಚ್ಚರಿಸಿದ್ದರೂ, ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಇದರಿಂದ ಮಾವೋವಾದಿಗಳು ಹತಾಶರಾಗಿ ಈ ಕೃತ್ಯ ನಡೆಸಿದ್ದಾರೆ ಎಂದು ಜಿಕೆ ವೀಧಿ ಠಾಣೆಯ ಅಧಿಕಾರಿ ಪಿ. ಅನೀಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News