ಮಾ.15ರಿಂದ ಭೌತಿಕ ವಿಚಾರಣೆ ಆರಂಭಕ್ಕೆ ಸುಪ್ರೀಂ ನಿರ್ಧಾರ
ಹೊಸದಿಲ್ಲಿ, ಮಾ.6: ಮಾರ್ಚ್ 15ರಿಂದ ಪ್ರಾಯೋಗಿಕವಾಗಿ ಆಂಶಿಕ ಭೌತಿಕ ವಿಚಾರಣೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಶನಿವಾರ ಹೇಳಿದೆ.
ಹೈಬ್ರಿಡ್ ಕಾರ್ಯಕಲಾಪ ಎಂದು ವರ್ಗೀಕರಿಸಲಾಗಿರುವ ಈ ಆಂಶಿಕ ಭೌತಿಕ ವಿಚಾರಣೆಯಲ್ಲಿ ಅರ್ಜಿದಾರರಿಗೆ ನ್ಯಾಯಾಲಯದ ಕಲಾಪದಲ್ಲಿ ಭೌತಿಕವಾಗಿ(ಸ್ವತಃ) ಅಥವಾ ವೀಡಿಯೊ ಕಾನ್ಫರೆನ್ಸಿಂಗ್ ಪ್ರಕ್ರಿಯೆಯ ಮೂಲಕ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಇದನ್ನು ಮಾರ್ಚ್ 15ರಿಂದ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ. ಪ್ರತೀ ಮಂಗಳವಾರ, ಬುಧವಾರ ಮತ್ತು ಗುರುವಾರ ಹೈಬ್ರಿಡ್ ಕಾರ್ಯಕಲಾಪ ನಿಗದಿಗೊಳಿಸಲಾಗಿದೆ. ಈ ದಿನದಂದು ನಿಗದಿಯಾಗಿರುವ ಅಂತಿಮ ವಿಚಾರಣೆಯ ಪ್ರಕರಣ ಸೇರಿದಂತೆ ಇತರ ಪ್ರಕರಣಗಳ ವಿಚಾರಣೆ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕೊರೋನ ಸೋಂಕಿನ ಹಿನ್ನೆಲೆಯಲ್ಲಿ, ಕಳೆದ ವರ್ಷದ ಎಪ್ರಿಲ್‌ನಿಂದ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನ ಕಾರ್ಯಕಲಾಪ ವರ್ಚುವಲ್ ವಿಧಾನದಲ್ಲಿ ನಡೆಯುತ್ತಿದೆ. ಇದೀಗ ಕೊರೋನ ಸೋಂಕಿನ ವಿರುದ್ಧದ ಲಸಿಕೆ ಹಾಕುವ ಎರಡನೇ ಹಂತದ ಪ್ರಕ್ರಿಯೆ ಜಾರಿಯಲ್ಲಿದೆ.