ಪರೀಕ್ಷಿಸಿ, ಪತ್ತೆಹಚ್ಚಿ, ಚಿಕಿತ್ಸೆ ನೀಡಿ: 8 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ ಸೂಚನೆ

Update: 2021-03-06 18:13 GMT

ಹೊಸದಿಲ್ಲಿ, ಮಾ. 3: ಕೊರೋನಾ ಸಾಂಕ್ರಾಮಿಕ ರೋಗ ಉತ್ತುಂಗದ ಸ್ಥಿತಿಯಲ್ಲಿ ಇರುವಾಗ ಅತ್ಯುತ್ತಮ ಫಲಿತಾಂಶ ನೀಡಿದ ಕಾರ್ಯತಂತ್ರವಾದ ‘‘ಪರೀಕ್ಷೆ-ಪತ್ತೆಹಚ್ಚುವಿಕೆ-ಚಿಕಿತ್ಸೆ’’ಯನ್ನು ಮುಂದುವರಿಸುವಂತೆ ಅತ್ಯಧಿಕ ಪಾಸಿಟಿವ್ ಕೊರೋನ ಪ್ರಕರಣಗಳು ವರದಿಯಾದ 8 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ ಶನಿವಾರ ಸೂಚಿಸಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹಾಗೂ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿನೋದ್ ಪೌಲ್ ಅವರು ಹರ್ಯಾಣ, ಆಂಧ್ರಪ್ರದೇಶ, ಒಡಿಶಾ, ಗೋವಾ, ಹಿಮಾಚಲಪ್ರದೇಶ, ಉತ್ತರಾಖಂಡ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದಿಲ್ಲಿ, ಚಂಡಿಗಢದ ಆರೋಗ್ಯ ಕಾರ್ಯದರ್ಶಿಗಳು ಹಾಗೂ ಯೋಜನಾ ನಿರ್ದೇಶಕರು (ಎನ್‌ಎಚ್‌ಎಂ)ರೊಂದಿಗೆ ಮಾತುಕತೆ ನಡೆಸಿದ್ದಾರೆ.

ಅವರು ಕಣ್ಗಾವಲು, ಕಂಟೈನ್ಮೆಂಟ್ ಕುರಿತು ಮರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಇತ್ತೀಚೆಗೆ ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಾಗೂ ದಿನನಿತ್ಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಈ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕುರಿತು ಪ್ರತಿಕ್ರಿಯೆ ಕೋರಿದ್ದಾರೆ.

ದಿಲ್ಲಿಯ 9, ಹರ್ಯಾಣದ 15, ಆಂಧ್ರಪ್ರದೇಶದ 10, ಒಡಿಶಾದ 10, ಉತ್ತರಾಖಂಡದ 7, ಗೋವಾದ 2. ಚಂಡಿಗಢದ 1, ಹಿಮಾಚಲಪ್ರದೇಶದ 9 ಜಿಲ್ಲೆಗಳಲ್ಲಿ ಒಟ್ಟು ಪರೀಕ್ಷೆಯಲ್ಲಿ ಇಳಿಕೆ; ಆರ್‌ಟಿಸಿ-ಪಿಸಿಆರ್ ಪರೀಕ್ಷೆಯ ಕಡಿಮೆ ಪಾಲು; ವಾರದ ಪಾಸಿಟಿವ್ ಪ್ರಕರಣಗಳ ಏರಿಕೆ ಹಾಗೂ ಕೊರೋನಾ ಪಾಸಿಟಿವ್ ಪ್ರಕರಣಗಳ ಕಡಿಮ ಸಂಖ್ಯೆಯ ಪತ್ತೆ ಕಂಡು ಬಂದಿದೆ. ಇದು ನೆರೆಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹರಡುವ ಸಾಧ್ಯತೆ ಇದೆ ಎಂದು ನಿರ್ಧರಿಸಲಾಯಿತು.

  ಮನೆಯಲ್ಲಿ ಐಸೋಲೇಶನ್‌ನಲ್ಲಿ ಇರುವ ಸಕ್ರಿಯ ಪ್ರಕಣಗಳ ಬಗ್ಗೆ ಪ್ರಾಮಾಣಿಕ ಐಸೋಲೇಶನ್ ಹಾಗೂ ವೈದ್ಯಕೀಯ ಮೇಲ್ವಿಚಾರಣೆಗೆ ಹಾಗೂ ತೀವ್ರ ಹರಡುವ ಸಂದರ್ಭ ಕೂಡ ಗಮನಹರಿಸುವಂತೆ ಕೇಂದ್ರ ಸರಕಾರ ಸಂಬಂಧಿತ ಪ್ರಾಧಿಕಾರಕ್ಕೆ ಸೂಚಿಸಿದೆ.

  ಈ ನಡುವೆ ಅತ್ಯಧಿಕ ಕೊರೋನ ಪ್ರಕರಣಗಳು ವರದಿಯಾಗುವ ಮೂಲಕ ಒಟ್ಟು ಕೊರೋನ ಸೋಂಕಿನ ಪ್ರಕರಣಗಳ ಏರಿಕೆಗೆ ಕಾರಣವಾಗಿರುವ ಮಹಾರಾಷ್ಟ್ರ, ಪಂಜಾಬ್‌ಗೆ ಕೇಂದ್ರ ಸರಕಾರದ ಉನ್ನತ ಮಟ್ಟದ ಬಹು ಶಿಸ್ತಿನ ಸಾರ್ವಜನಿಕ ಆರೋಗ್ಯ ತಂಡ ಧಾವಿಸಿದೆ. ಕೊರೋನ ಪ್ರಕರಣಗಳ ಕಣ್ಗಾವಲು, ನಿಯಂತ್ರಣ, ಕಂಟೈನ್ಮೆಂಟ್ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಆರೋಗ್ಯ ಇಲಾಖೆಗಳಿಗೆ ನೆರವು ನೀಡಲು ಈ ತಂಡವನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News