ದಿಲ್ಲಿ ಶಾಲೆಗಳಿಗೆ ಪ್ರತ್ಯೇಕ ಶಿಕ್ಷಣ ಮಂಡಳಿ: ಅರವಿಂದ ಕೇಜ್ರಿವಾಲ್

Update: 2021-03-06 18:14 GMT

 ಹೊಸದಿಲ್ಲಿ, ಮಾ. 3: ಇತರ ರಾಜ್ಯಗಳಂತೆ ದಿಲ್ಲಿ ಕೂಡ ತನ್ನದೇ ಆದ ಶಾಲಾ ಶಿಕ್ಷಣ ಮಂಡಳಿ ಹೊಂದಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.

ಸಂಪುಟ ಸಭೆಯಲ್ಲಿ ದಿಲ್ಲಿ ಶಾಲಾ ಶಿಕ್ಷಣದ ಮಂಡಳಿ ರೂಪಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ.

ದಿಲ್ಲಿಯಲ್ಲಿ 1,000 ಸರಕಾರಿ ಶಾಲೆಗಳು ಹಾಗೂ 1,700 ಖಾಸಗಿ ಶಾಲೆಗಳು ಇವೆ. ಎಲ್ಲ ಸರಕಾರಿ ಶಾಲೆಗಳು ಹಾಗೂ ಹೆಚ್ಚಿನ ಖಾಸಗಿ ಶಾಲೆಗಳು ಸಿಬಿಐಸ್‌ಇಗೆ ಒಳಪಟ್ಟಿವೆ ಎಂದು ಕೇಜ್ರಿವಾಲ್ ಹೇಳಿದರು. ಮುಂಬರುವ ಶೈಕ್ಷಣಿಕ ವರ್ಷದಲ್ಲಿ 20ರಿಂದ 25 ಸರಕಾರಿ ಶಾಲೆಗಳು ನೂತನ ರಾಜ್ಯ ಶಾಲಾ ಶಿಕ್ಷಣ ಮಂಡಳಿಯ ಭಾಗವಾಗಲಿದೆ. ಈ ಶಾಲೆಗಳನ್ನು ಸಿಬಿಎಸ್‌ಇ ವ್ಯಾಪ್ತಿಗೊಳಪಟ್ಟಿರುವುದನ್ನು ರದ್ದುಗೊಳಿಸಲಾಗುವುದು. ಶಾಲೆಯ ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಪೋಷಕರೊಂದಿಗೆ ಚರ್ಚೆ ನಡೆಸಿದ ಬಳಿಕ ಶಾಲೆಗಳನ್ನು ರಾಜ್ಯ ಶಾಲಾ ಶಿಕ್ಷಣ ಮಂಡಳಿ ಅಡಿಯಲ್ಲಿ ತರಲು ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

 ಬಾಯಿಪಾಠದ ಮೂಲಕ ಕಲಿಸುವುದಕ್ಕೆ ಗಮನ ಹರಿಸುವುದಿಲ್ಲ. ಬದಲಾಗಿ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಇದು ಪ್ರಾಮಖ್ಯತೆ ನೀಡಲಿದೆ. ವಿದ್ಯಾರ್ಥಿಗಳನ್ನು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ವರ್ಷ ಹಾಗೂ ಶಿಕ್ಷಣ ವ್ಯವಸ್ಥೆಯ ಮೂಲಕ ವೌಲ್ಯಮಾಪನ ಮಾಡಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

4ರಿಂದ 5 ವರ್ಷಗಳ ಒಳಗೆ ಎಲ್ಲ ಶಾಲೆಗಳು ಸ್ವಯಂಪ್ರೇರಿತವಾಗಿ ಈ ಮಂಡಳಿಗೆ ಒಳಪಡಲಿವೆ ಎಂದು ನಾವು ಭಾವಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

 ರಾಜ್ಯ ಶಿಕ್ಷಣ ಮಂಡಳಿ ಹಾಗೂ ಪಠ್ಯಕ್ರಮಗಳ ಸುಧಾರಣೆಗೆ ಯೋಜನೆ ಹಾಗೂ ವಿನ್ಯಾಸವನ್ನು ಸಿದ್ಧಪಡಿಸಲು ದಿಲ್ಲಿ ಸರಕಾರ ಕಳೆದ ಜುಲೈಯಲ್ಲಿ ಎರಡು ಸಮಿತಿಗಳನ್ನು ರೂಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News