ಲಸಿಕೆಯ 2ನೇ ಡೋಸ್ ತೆಗೆದುಕೊಂಡ ಬಳಿಕ ಆರೋಗ್ಯ ಅಧಿಕಾರಿಗೆ ಕೊರೋನ ಸೋಂಕು!

Update: 2021-03-07 17:36 GMT

ಹೊಸದಿಲ್ಲಿ,ಮಾ.7: ಗುಜರಾತಿನ ಗಾಂಧಿನಗರ ಜಿಲ್ಲೆಯ ದೆಹಗಾಮ್ ತಾಲೂಕಿನಲ್ಲಿ ಕೊರೋನವೈರಸ್ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡಿದ್ದ ಆರೋಗ್ಯಾಧಿಕಾರಿಯೋರ್ವರು ತಪಾಸಣೆಗೊಳಗಾದ ಬಳಿಕ ಕೋವಿಡ್-19 ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ.
 ಅವರು ಜ.16ರಂದು ಲಸಿಕೆಯ ಮೊದಲ ಡೋಸ್ ಮತ್ತು ಫೆ.15ರಂದು ಎರಡನೇ ಡೋಸ್ ಸ್ವೀಕರಿಸಿದ್ದರು. ಅದರ ಬೆನ್ನಲ್ಲೇ ಅವರಿಗೆ ಜ್ವರ ಕಾಣಿಸಿಕೊಂಡಿದ್ದು,ಕೋವಿಡ್-19 ಪರೀಕ್ಷೆಯನ್ನು ಮಾಡಿಸಿಕೊಂಡಿದ್ದರು. ಫೆ.20ರಂದು ವರದಿಯು ಬಂದಿದ್ದು,ಅವರಲ್ಲಿ ಸೋಂಕು ಪತ್ತೆಯಾಗಿತ್ತು. ಲಕ್ಷಣಗಳು ಸೌಮ್ಯವಾಗಿದ್ದರಿಂದ ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿತ್ತು. ಅವರೀಗ ಚೇತರಿಸಿಕೊಂಡಿದ್ದು, ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ ಎಂದು ಗಾಂಧಿನಗರದ ಮುಖ್ಯ ವೈದ್ಯಾಧಿಕಾರಿ ಡಾ.ಎಂ.ಎಚ್.ಸೋಳಂಕಿ ಹೇಳಿದರು.
 ವ್ಯಕ್ತಿಯು ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದುಕೊಂಡ ಬಳಿಕ ಶರೀರದಲ್ಲಿ ಪ್ರತಿಕಾಯಗಳು ಅಭಿವೃದ್ಧಿಗೊಳ್ಳಲು ಸುಮಾರು 45 ದಿನಗಳು ಬೇಕಾಗುತ್ತವೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಎರಡು ಡೋಸ್ ಗಳನ್ನು ಪಡೆದುಕೊಂಡ ಬಳಿಕವೂ ಮಾಸ್ಕ್ ಧಾರಣೆ, ಸುರಕ್ಷಿತ ಅಂತರದಂತಹ ಕೋವಿಡ್-19 ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News