​ಭಾರತಕ್ಕೆ ಪಲಾಯನ ಮಾಡಿದ 8 ಪೊಲೀಸರ ಹಸ್ತಾಂತರಕ್ಕೆ ಮ್ಯಾನ್ಮಾರ್ ಮನವಿ

Update: 2021-03-07 04:14 GMT
ಸಾಂದರ್ಭಿಕ ಚಿತ್ರ

ಐಜ್ವಾಲ್ : ನೆರೆಯ ಮ್ಯಾನ್ಮಾರ್‌ನಲ್ಲಿ ಕಳೆದ ತಿಂಗಳು ಮಿಲಿಟರಿ ಕ್ಷಿಪ್ರಕ್ರಾಂತಿ ನಡೆದ ಬಳಿಕ ಭಾರತಕ್ಕೆ ಪಲಾಯನ ಮಾಡಿ ಆಶ್ರಯ ಪಡೆದಿರುವ ಎಂಟು ಮಂದಿ ಪೊಲೀಸರನ್ನು ಹಸ್ತಾಂತರಿಸುವಂತೆ ಮ್ಯಾನ್ಮಾರ್, ಮಿಜೋರಾಂ ಸರ್ಕಾರಕ್ಕೆ ಮನವಿ ಮಾಡಿದೆ.

ಮಿಜೋರಾಂ, ಮ್ಯಾನ್ಮಾರ್ ಜತೆ 510 ಕಿಲೋಮೀಟರ್‌ಗಳ ಪೋರಸ್ ಗಡಿ ಹಂಚಿಕೊಂಡಿದ್ದು, ಮ್ಯಾನ್ಮಾರ್‌ನ ಸಶಸ್ತ್ರ ಪಡೆಗಳು ದೇಶದಲ್ಲಿ ಒಂದು ವರ್ಷ ಕಾಲ ತುರ್ತು ಪರಿಸ್ಥಿತಿ ಹೇರಿದ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳೂ ನಡೆದಿದ್ದವು.

"ಮ್ಯಾನ್ಮಾರ್‌ನ ಫಲಾಮ್ ಜಿಲ್ಲಾಧಿಕಾರಿ ಬರೆದ ಪತ್ರ ನಮ್ಮ ಕೈಸೇರಿದ್ದು, ಮ್ಯಾನ್ಮಾರ್‌ನಿಂದ ಪಲಾಯನ ಮಾಡಿ, ಮಿಜೋರಾಂನಲ್ಲಿ ಆಶ್ರಯ ಪಡೆದಿರುವ ಎಂಟು ಮಂದಿ ಪೊಲೀಸರನ್ನು ಬಂಧಿಸಿ ಹಸ್ತಾಂತರಿಸುವಂತೆ ಕೋರಿದ್ದಾರೆ" ಎಂದು ಚಂಪಾಯಿ ಜಿಲ್ಲಾಧಿಕಾರಿ ಮೈತ್ರಾ ಸಿ.ಟಿ. ಜ್ಯೂಲಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಗೃಹ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ, ಕಳೆದ ಕೆಲ ದಿನಗಳಲ್ಲಿ 16 ಮಂದಿ ಮ್ಯಾನ್ಮಾರ್ ಗಡಿ ದಾಟಿ ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಪೈಕಿ 11 ಮಂದಿ ಪೊಲೀಸರು ಎಂದು ಹೇಳಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದ್ದು, ಕೇಂದ್ರ ಸರ್ಕಾರದಿಂದ ರಾಜ್ಯ ನಿರ್ದೇಶನ ಬಯಸಿದೆ ಎಂದು ಉನ್ನತ ಮೂಲಗಳು ಹೇಳಿವೆ. ಗಲಭೆ ಪೀಡಿತ ದೇಶದಿಂದ ಜನ ಗಡಿಯೊಳಗೆ ನುಸುಳುವುದನ್ನು ತಡೆಯಲು ಗಡಿಭಾಗದಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ ಎಂದು ಅಸ್ಸಾಂ ರೈಫಲ್ ಡಿಐಜಿ ಬ್ರಿಗೇಡಿಯರ್ ದಿಗ್ವಿಜಯ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News