ಕುಸ್ತಿ: ವಾರದಲ್ಲಿ ಎರಡನೇ ಚಿನ್ನ ಗೆದ್ದ ವಿನೇಶ್ ಫೋಗಾಟ್

Update: 2021-03-07 04:52 GMT

ಚೆನ್ನೈ : ಕೆನಡಾದ ಡಯಾನಾ ಮೇರಿ ಹೆಲೆನ್ ವಿಕೆರ್ ಅವರನ್ನು 4-0 ಅಂಕಗಳಿಂದ ಸೋಲಿಸಿದ ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಫೋಗಾಟ್ ಮೆಟ್ಟೆಯೊ ಪೆಲಿಕಾನ್ ರ್ಯಾಂಕಿಂಗ್ ಸರಣಿಯ 53 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಉಳಿಸಿಕೊಂಡಿದ್ದಾರೆ.

ರೋಮ್‌ನಲ್ಲಿ ಶನಿವಾರ ನಡೆದ ಹಣಾಹಣಿಯಲ್ಲಿ ಗೆಲುವಿನ ನಗೆ ಬೀರಿದ ವಿನೇಶ್‌ಗೆ ಇದು ಒಂದು ವಾರದಲ್ಲಿ ಎರಡನೇ ಚಿನ್ನದ ಪದಕ. ಇದಕ್ಕೂ ಮುನ್ನ ವಿನೇಶ್ ಕಳೆದ ಶನಿವಾರ ಕಿಯೋವ್‌ನಲ್ಲಿ ನಡೆದ 24ನೇ ಔಟ್‌ಸ್ಟ್ಯಾಂಡಿಂಗ್ ಉಕ್ರೇನಿಯನ್ ರೆಸ್ಲರ್ಸ್‌ ಆ್ಯಂಡ್ ಕೋಚಸ್ ಮೆಮೋರಿಯಲ್ ಟೂರ್ನಿಯಲ್ಲಿ ಚಿನ್ನ ಗೆದ್ದಿದ್ದರು.

ರೋಮ್ ಸರಣಿಯಲ್ಲಿ ಭಾರತದ ಸರಿತಾ ಮೋರ್ 57 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. ಗ್ರೀಕೊ ರೋಮನ್ ಕುಸ್ತುಪಟು ಕುಲದೀಪ್ ಮಲಿಕ್ 72 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು.

ಗ್ರೀಕೋ ರೋಮನ್ ವಿಭಾಗದಲ್ಲಿ ಭಾರತ ಶುಕ್ರವಾರ ಮೂರು ಕಂಚಿನ ಪದಕ ಗೆದ್ದಿತ್ತು. ಇದುವರೆಗೆ ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದಿಂದ ಅರ್ಹತೆ ಪಡೆದ ಏಕೈಕ ಕುಸ್ತಿಪಟು ಎನಿಸಿರುವ ವಿನೇಶ್, ಭಾರತದವರೇ ಆದ ನಂದಿನಿ ಸಾಳುಂಕೆ ವಿರುದ್ಧ 4-0 ಅಂತರದ ಗೆಲುವಿನ ಮೂಲಕ ಅಭಿಯಾನ ಆರಂಭಿಸಿದರು.

ಎರಡನೇ ಎದುರಾಳಿ ಗಾಯಾಳುವಾಗಿದ್ದರಿಂದ ಮತ್ತು ಮೂರನೇ ಸ್ಪರ್ಧಿ ಅರ್ಹತೆ ಕಳೆದುಕೊಂಡಿದ್ದರಿಂದ ಸೆಮಿಫೈನಲ್‌ಗೆ ರಹದಾರಿ ಪಡೆದಿ ದ್ದರು. ಕೆನಡಾದ ಸಮಂತಾ ಲೇಗ್ ಸ್ಟಿವರ್ಟ್ ವಿರುದ್ಧ 4-0 ಜಯ ಸಾಧಿಸಿ ಫೈನಲ್ ಪ್ರವೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News