ಕೃಷಿ ಕಾಯ್ದೆಗೆ ತಿದ್ದುಪಡಿ ತರಲು ಸಿದ್ಧ ಆದರೆ...: ಕೇಂದ್ರ ಕೃಷಿ ಸಚಿವ ತೋಮರ್‌ ಹೇಳಿದ್ದೇನು?

Update: 2021-03-07 06:15 GMT

ಹೊಸದಿಲ್ಲಿ: ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಶನಿವಾರ ಕೃಷಿ ಕಾನೂನುಗಳ ಟೀಕಾಕಾರರಿಗೆ, ವಿಶೇಷವಾಗಿ ವಿರೋಧ ಪಕ್ಷದ ನಾಯಕರ ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸುವವರು ಅದರಲ್ಲಿರುವ ಉತ್ತಮವಾದ ವಿವರಗಳನ್ನು ತಿಳಿದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.

"ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ. ನಾವು ಈ ಕಾನೂನುಗಳನ್ನು ತಿದ್ದುಪಡಿ ಮಾಡಲು ಸಿದ್ಧರಿದ್ದೇವೆ ಆದರೆ ಕಾನೂನುಗಳು ದೋಷಪೂರಿತವೆಂದು ಯಾರೂ ಹೇಳಬಾರದು. ಯಾರೂ ಉತ್ತರ ನೀಡುವ ಸ್ಥಿತಿಯಲ್ಲಿಲ್ಲ" ಎಂದು ಸಚಿವರು ಕಾರ್ಯಕ್ರಮವೊಂದರಲ್ಲಿ ಹೇಳಿದರು.

ನೂತನ ಕೃಷಿ ಕಾನೂನುಗಳ ಕುರಿತು ಮಾತುಕತೆ ನಡೆಸಲು ಸಚಿವ ತೋಮರ್ ಪ್ರತಿಭಟನಾಕಾರರೊಂದಿಗೆ ಹಲವಾರು ಸುತ್ತಿನ ಚರ್ಚೆಗಳನ್ನು ನಡೆಸಿದ್ದಾರೆ. ಇದುವರೆಗೂ ಈ ಕುರಿತು ಯಾವುದೇ ಪರಿಹಾರ ಕಂಡು ಬಂದಿಲ್ಲ. ರೈತರು ತಮ್ಮ ಪ್ರತಿಭಟನೆಯ 100 ನೇ ದಿನವಾದ ನಿನ್ನೆ ರಾಷ್ಟ್ರ ರಾಜಧಾನಿಯ ಬಳಿ ಪ್ರಮುಖ ಹೆದ್ದಾರಿಯನ್ನು ನಿರ್ಬಂಧಿಸಿದರು.

"ಮಾತುಕತೆ ವೇಳೆ, ನಾನು ತಿದ್ದುಪಡಿಗಳ ಭವಿಷ್ಯದ ಬಗ್ಗೆ ಮಾತನಾಡಿದ್ದೇನೆ, ಆದರೆ ತಿದ್ದುಪಡಿ ಪ್ರಸ್ತಾಪಗಳು ಕಾನೂನುಗಳು ದೋಷಪೂರಿತವಾಗಿವೆ ಎಂದು ಅರ್ಥವಲ್ಲ. ಪ್ರತಿಭಟನೆಯ ಪ್ರಮುಖ ಮುಖವಾಗಿ ರೈತರಾಗಿರುವ ಕಾರಣ ನಾನೇ ಈ ಕುರಿತು ಪ್ರಸ್ತಾಪ ಮಾಡಿದ್ದೇನೆ ಎಂದು ಅವರು ಹೇಳಿದರು.

ವಿರೋಧ ಪಕ್ಷದ ಮುಖಂಡರ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ವಿಷಯವನ್ನು ಅವರು ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು. "ಸಂಸತ್ತಿನಲ್ಲಿಯೂ ನಾನು ಕೇಂದ್ರದ ದೃಷ್ಟಿಕೋನವನ್ನು ಮುಂದಿಟ್ಟಿದ್ದೇನೆ. ಗಂಟೆಗಳ ಕಾಲ, ಎರಡೂ ಸದನಗಳಲ್ಲಿ ಎಲ್ಲ ವಿರೋಧ ಪಕ್ಷದ ನಾಯಕರನ್ನು ನಾವು ಆಗ್ರಹಿಸಿದ್ದೇವೆ. ರಾಷ್ಟ್ರಪತಿ  ಭಾಷಣದ ನಂತರವೂ ಅವರು (ವಿರೋಧ ಪಕ್ಷದ ನಾಯಕರು) ರೈತ ಪ್ರತಿಭಟನೆಯ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಆದರೆ ಕಾನೂನಿನ ಕುರಿತು ಅವರೇನೂ ಮಾತನಾಡಲಿಲ್ಲ ಎಂದು  ತೋಮರ್ ಹೇಳಿದರು.

"ಬದಲಾವಣೆಯನ್ನು ತಂದಾಗ, ಅದನ್ನು ಕಾರ್ಯಗತಗೊಳಿಸುವುದು ಕಷ್ಟವಾಗುತ್ತದೆ. ಕೆಲವರು ಗೇಲಿ ಮಾಡುತ್ತಾರೆ, ಕೆಲವರು ಇದನ್ನು ಪ್ರತಿಭಟಿಸುತ್ತಾರೆ. ಆದರೂ ಬದಲಾವಣೆಯ ಹಿಂದೆ ನೀತಿ ಮತ್ತು ಆಶಯ ಇದ್ದರೆ, ಜನರು ಅದನ್ನು ಅಂತಿಮವಾಗಿ ಸ್ವೀಕರಿಸುತ್ತಾರೆ" ಎಂದು ಕೃಷಿ ಸಚಿವರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News