66ಲಕ್ಷ ರೂ. ಖರ್ಚು ಮಾಡಿ ಮೂರು ರೈಲಿನಲ್ಲಿ ಮೋದಿ ರ‍್ಯಾಲಿಗೆ ಜನರನ್ನು ಕರೆತಂದ ಬಿಜೆಪಿ ಮುಖಂಡರು: ವರದಿ

Update: 2021-03-07 14:26 GMT

ಕೋಲ್ಕತಾ: ಭಾನುವಾರ ಮಧ್ಯಾಹ್ನ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಬ್ರಿಗೇಡ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಹಲವು ಜಿಲ್ಲೆಗಳಿಂದ ಬಿಜೆಪಿ ಬೆಂಬಲಿಗರನ್ನು ಕರೆತರಲು 66 ಲಕ್ಷ ರೂ. ಖರ್ಚು ಮಾಡಿ ಮೂರು ರೈಲುಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕೋಲ್ಕತ್ತಾ ಮೂಲದ ಮಾಧ್ಯಮವೊಂದು ವರದಿ ಮಾಡಿದೆ. ಇದೇ ರ್ಯಾಲಿಯಲ್ಲಿ ಇಂದು ನಟ ಮಿಥುನ್‌ ಚಕ್ರವರ್ತಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಮೂಲಗಳ ಪ್ರಕಾರ, ಉತ್ತರ ದಿನಾಜ್‌ಪುರ ಜಿಲ್ಲೆಯ ಅಲಿಪುರ್ದುರ್, ಮಾಲ್ಡಾ ಮತ್ತು ಹರಿಶ್ಚಂದ್ರಪುರದಿಂದ ಬುಕ್ ಮಾಡಲಾಗಿರುವ ಈ ಮೂರು ರೈಲುಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಬಿಜೆಪಿ ಪಕ್ಷವು 66ಲಕ್ಷ ರೂ. ಖರ್ಚು ಮಾಡಿದೆ ಎನ್ನಲಾಗಿದೆ. 

ಅಲಿಪುರ್ದುರ್ ಮತ್ತು ಮಾಲ್ಡಾದಿಂದ 22 ಬೋಗಿಗಳನ್ನು ಹೊಂದಿರುವ ವಿಶೇಷ ರೈಲುಗಳು  ಶನಿವಾರ ಸಂಜೆ ಹೊರಟು ಭಾನುವಾರ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಹೌರಾ ನಿಲ್ದಾಣವನ್ನು ತಲುಪಿದ್ದು, ಈ ಎರಡು ವಿಶೇಷ ರೈಲುಗಳ ಬಾಡಿಗೆ ಶುಲ್ಕ ಕ್ರಮವಾಗಿ 26 ಲಕ್ಷ ಮತ್ತು 22 ಲಕ್ಷ ರೂ. ಎಂದು ವರದಿಯು ಉಲ್ಲೇಖಿಸಿದೆ.

ಹರಿಶ್ಚಂದ್ರಪುರದಿಂದ 16 ಬೋಗಿಗಳನ್ನು ಹೊಂದಿರುವ ಮೂರನೇ ವಿಶೇಷ ರೈಲು ಶನಿವಾರ ಸಂಜೆ ಹೊರಟು ಭಾನುವಾರ ಬೆಳಗ್ಗೆ ಸೀಲ್ಡಾ ನಿಲ್ದಾಣವನ್ನು ತಲುಪಿದೆ ಎನ್ನಲಾಗಿದೆ. ಈ ವಿಶೇಷ ರೈಲಿನ ಬಾಡಿಗೆ ಶುಲ್ಕ 18 ಲಕ್ಷ ರೂ. ಆಗಿದ್ದು, ಈ ರೈಲು ಹೌರಾ ಮತ್ತು ಸೀಲ್ಡಾದಲ್ಲಿ ಎರಡು ಕಡೆಗಳಲ್ಲಿರುವ ಜನರನ್ನು ಮತ್ತು ಬಿಜೆಪಿ ಬೆಂಬಲಿಗರನ್ನು ಆಯಾ ಸ್ಥಳಗಳಿಂದ ಕರೆದೊಯ್ದು ಮರಳಿ ಕರೆದೊಯ್ದಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News