ಭರತನಾಟ್ಯ ಅಭ್ಯಾಸದಿಂದ ಸಂಸ್ಕೃತಿಯ ಉಳಿವು: ಪ್ರತಾಪಸಿಂಹ ನಾಯಕ್

Update: 2021-03-07 16:00 GMT

ಮಂಗಳೂರು, ಮಾ.7: ಭಾರತೀಯ ಕಲಾಪ್ರಕಾರಗಳಲ್ಲಿ ಭರತನಾಟ್ಯ ಶ್ರೇಷ್ಠವಾದುದು. ವಿಶ್ವಮಾನ್ಯವಾದ ಭರತನಾಟ್ಯ ಕಲೆಯ ಅಭ್ಯಾಸದಿಂದ ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಯುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಮಂಗಳೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ನಗರದ ಪುರಭವನದಲ್ಲಿ ರವಿವಾರ ನಡೆದ ‘ಭರತಮುನಿ ಜಯಂತಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಧ್ಯಾತ್ಮ ಭಾರತದ ಆತ್ಮವಾಗಿದೆ. ಭರತನಾಟ್ಯ ಅಧ್ಯಾತ್ಮ ಒಳಗೊಂಡ ಕಲೆಯಾಗಿದೆ. ಮನಸ್ಸಿಗೆ ಪೂರ್ಣತ್ವ ನೀಡುವ ಭರತನಾಟ್ಯ ಕಲೆಯನ್ನು ಇಂದಿನ ಪೀಳಿಗೆಯೂ ಕಲಿತು, ಉಳಿಸಿ, ಬೆಳೆಸಬೇಕು ಎಂದರು.

ಹಿರಿಯ ನಾಟ್ಯಗುರು ಉಳ್ಳಾಲ ಮೋಹನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ನೃತ್ಯಗುರು ವಿದುಷಿ ಭ್ರಮರಿ ಶಿವಪ್ರಕಾಶ್ ಭರತಮುನಿಗೆ ನುಡಿನಮನ ಸಲ್ಲಿಸಿದರು. ಸಂಸ್ಕೃತ ಭಾರತಿ ಅಧ್ಯಕ್ಷ ಎಂ.ಆರ್. ವಾಸುದೇವ ಅತಿಥಿಯಾಗಿದ್ದರು. ಹಿರಿಯ ಮೃದಂಗ ವಿದ್ವಾಂಸ ವಿದ್ವಾನ್ ರಮೇಶ್ ಬಿ. ಸುರತ್ಕಲ್ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ವಿದುಷಿ ಕಮಲಾ ಭಟ್, ವಿದುಷಿ ನಯನಾ ವಿ. ರೈ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಯು.ಕೆ. ಪ್ರವೀಣ್, ಸೌಮ್ಯ ಎಸ್. ರಾವ್, ರಾಜಶ್ರೀ, ಶ್ರೀಧರ ಹೊಳ್ಳ, ಸುರೇಶ ಅತ್ತಾವರ, ಶಾರದಾಮಣಿ ಶೇಖರ್, ವಿದ್ಯಾ ಮನೋಜ್, ಯಶಾ ರಾಮಕೃಷ್ಣ, ಸುಧೀರ್ ರಾವ್ ಕೊಡವೂರು, ಸುಮಂಗಲಾ ರತ್ನಾಕರ್ ಉಪಸ್ಥಿತರಿದ್ದರು.

ಕರಾವಳಿ ನೃತ್ಯಕಲಾ ಪರಿಷತ್ ಅಧ್ಯಕ್ಷ ಪಿ. ಕಮಲಾಕ್ಷ ಆಚಾರ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಶೇಖರ ನಾವಡ ವಂದಿಸಿದರು. ಶ್ರೀಲತಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ನೃತ್ಯನಿಕೇತನ ಅಂಬಲಪಾಡಿ ಉಡುಪಿ, ವಿಶ್ವಕಲಾ ನಿಕೇತನ ಪುತ್ತೂರು, ನಾಟ್ಯಾಲಯ ಉರ್ವ ಸಂಸ್ಥೆಯ ಶಿಷ್ಯವೃಂದದಿಂದ ಸಮೂಹ ನೃತ್ಯ, ವಿದುಷಿ ಡಾ. ಮಂಜರಿಚಂದ್ರ ಪುಷ್ಪರಾಜ್, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ವಿದ್ವಾನ್ ಮಂಜುನಾಥ ಎನ್. ಪುತ್ತೂರು ಅವರಿಂದ ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News