ಬಿಜೆಪಿಯವರು ವೋಟಿಗಾಗಿ ಹಣ ನೀಡಿದರೆ ತೆಗೆದುಕೊಳ್ಳಿ, ಟಿಎಂಸಿಗೆ ಮತ ಹಾಕಿ: ಮಮತಾ ಕರೆ

Update: 2021-03-07 17:11 GMT
Photo: twitter

ಕೋಲ್ಕತಾ: ಒಂದು ವೇಳೆ ಅವರು(ಬಿಜೆಪಿ)ಮತಗಳನ್ನು ಖರೀದಿಸಲು ಮುಂದಾದರೆ, ನೀವು ಹಣವನ್ನು ಪಡೆಯಿರಿ. ಆದರೆ, ಮತವನ್ನು ಮಾತ್ರ ಟಿಎಂಸಿಗೆ ಚಲಾಯಿಸಿ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉತ್ತರ ಬಂಗಾಳದ ಸಿಲಿಗುರಿಯಲ್ಲಿ ಇಂದು ನಡೆದ ಬೃಹತ್ ರ್ಯಾಲಿಯಲ್ಲಿ ಕರೆ ನೀಡಿದರು.

ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಏರಿಕೆಯನ್ನು ಖಂಡಿಸಿ ಸಿಲಿಗುರಿ ನಗರದಲ್ಲಿ ನಡೆದಿದ್ದ ಪಾದಯಾತ್ರೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ(ಟಿಎಂಸಿ)ಭಾಗವಹಿಸಿದರು.

“ಸಹೋದರಿಯರು ಹಾಗೂ ತಾಯಂದಿರ ಅಡುಗೆ ಕೋಣೆಯನ್ನು ಸುಟ್ಟುಹಾಕಲು ಪ್ರಯತ್ನಿಸಬೇಡಿ. ಅವರು ನಿಮ್ಮನ್ನು ಸುಡುತ್ತಾರೆ’’ ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಸಿದರು.

ಎಲ್ ಪಿಜಿ ಪ್ರತಿಕೃತಿಯಂತಿರುವ ಕೆಂಪುಬಣ್ಣದ ಫಲಕಗಳನ್ನು ಹಿಡಿದಿದ್ದ ಸಾವಿರಾರು ಜನರು ಮಮತಾ ಅವರೊಂದಿಗೆ ಹೆಜ್ಜೆ ಹಾಕಿದರು. ರಾಜ್ಯ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ, ಪಕ್ಷದ ಸಂಸದರಾದ ಮಿಮಿ ಚಕ್ರವರ್ತಿ ಹಾಗೂ ನುಸ್ರತ್ ಜಹಾನ್ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿದ್ದರು.

ಬಿಜೆಪಿಯ ಪರಿವರ್ತನಾ ಯಾತ್ರೆಯನ್ನು ಉಲ್ಲೇಖಿಸಿದ ಮಮತಾ, ಬದಲಾವಣೆಯು ದಿಲ್ಲಿಯಲ್ಲಿ ಮಾತ್ರ ನಡೆಯಲಿದೆ. ಪಶ್ಚಿಮಬಂಗಾಳದಲ್ಲಲ್ಲ. ಬಿಜೆಪಿ ಆಡಳಿತವಿರುವ ಉತ್ತರಪ್ರದೇಶ ಹಾಗೂ ಬಿಹಾರಕ್ಕೆ ಹೋಲಿಸಿದರೆ  ಪಶ್ಚಿಮಬಂಗಾಳ ರಾಜ್ಯವು ಮಹಿಳೆಯರಿಗೆ ಸುರಕ್ಷಿತವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News