ಅತ್ಯಧಿಕ ಮಲಿನ ಸ್ಥಳವಿರುವ ರಾಜ್ಯಗಳ ಪಟ್ಟಿ: ಒಡಿಶಾ, ಉ.ಪ್ರದೇಶ, ದಿಲ್ಲಿಗೆ ಅಗ್ರ 3 ಸ್ಥಾನ

Update: 2021-03-07 17:28 GMT

ಹೊಸದಿಲ್ಲಿ, ಮಾ.7: ಅತ್ಯಂತ ಹೆಚ್ಚು ಮಲಿನ ಸ್ಥಳಗಳಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಒಡಿಶಾ ಪ್ರಥಮ, ಉತ್ತರಪ್ರದೇಶ ದ್ವಿತೀಯ ಮತ್ತು ದಿಲ್ಲಿ ತೃತೀಯ ಸ್ಥಾನ ಪಡೆದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ತಿಳಿಸಿದೆ.

ವಿಷಯುಕ್ತ ಮತ್ತು ಹಾನಿಕಾರಕ ಭೌತಿಕ ಅಂಶಗಳನ್ನು ಒಳಗೊಂಡಿರುವ 112 ಸ್ಥಳಗಳು ಭಾರತದಲ್ಲಿವೆ. ಇದಲ್ಲದೆ, ಮಲಿನಗೊಂಡಿರಬಹುದಾದ, ಆದರೆ ಪರಿಶೋಧನೆ ಮತ್ತು ದೃಢೀಕರಣದ ಅಗತ್ಯವಿರುವ 168 ಸ್ಥಳಗಳೂ ದೇಶದಲ್ಲಿವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶದಲ್ಲಿ ಉಲ್ಲೇಖಿಸಲಾಗಿದೆ. ಒಡಿಶಾದಲ್ಲಿ 23 ಕಲುಷಿತ ಸ್ಥಳಗಳಿದ್ದರೆ ಉತ್ತರಪ್ರದೇಶದಲ್ಲಿ 21, ದಿಲ್ಲಿಯಲ್ಲಿ 11ಕಲುಷಿತ ಸ್ಥಳಗಳಿವೆ. ಅಲ್ಲದೆ 12 ಸ್ಥಳಗಳು ಸಂಭಾವ್ಯ ಕಲುಷಿತ ಸ್ಥಳಗಳ ಪಟ್ಟಿಯಲ್ಲಿವೆ.

ತ್ಯಾಜ್ಯ ಸುರಿಯುವ ಪ್ರದೇಶಗಳು, ತ್ಯಾಜ್ಯ ಸಂಸ್ಕರಣಾ ಪ್ರದೇಶಗಳು, ತಿಪ್ಪೆಗುಂಡಿಗಳು, ಗಣಿಗಾರಿಕೆ ನಡೆದಿರುವ ಪ್ರದೇಶಗಳು, ಸೋರಿಕೆ ಪ್ರದೇಶಗಳು, ರಾಸಾಯನಿಕ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಪ್ರದೇಶ ಹೊಂದಿರುವ ಸ್ಥಳಗಳನ್ನು ಮಲಿನ ಪ್ರದೇಶ ಎಂದು ಕರೆಯಲಾಗುತ್ತದೆ. ಮನುಷ್ಯರ ಆರೋಗ್ಯಕ್ಕೆ ಹಾಗೂ ಪರಿಸರಕ್ಕೆ ಬೆದರಿಕೆ ಒಡ್ಡುವಂತಹ ವಿಷಕಾರಿ ಮತ್ತು ಅಪಾಯಕಾರಿ ಘಟಕಗಳನ್ನು ಒಳಗೊಂಡಿರುವ ಪ್ರದೇಶಗಳನ್ನು ಕಲುಷಿತ ಅಥವಾ ಮಲಿನ ಸ್ಥಳಗಳೆಂದು ವಿಶ್ಲೇಷಿಸಲಾಗಿದೆ. ಸಂಭವನೀಯ ಕಲುಷಿತ ಪ್ರದೇಶಗಳೆಂದರೆ , ಇಂತಹ ವಿಷಕಾರಿ ಘಟಕಗಳು ಒಳಗೊಂಡಿವೆ ಎನ್ನಲಾದ, ಆದರೆ ವೈಜ್ಞಾನಿಕವಾಗಿ ಸಾಬೀತಾಗದ ಪ್ರದೇಶಗಳು ಎಂದು ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಹಸಿರು ಮಂಡಳಿಯ ಸೂಚನೆಯ ಮೇರೆಗೆ 7 ರಾಜ್ಯಗಳ 14 ಕಲುಷಿತ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭವಾಗಿದೆ (ಗುಜರಾತ್, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಉತ್ತರಪ್ರದೇಶ) ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News