ಕೇರಳದಲ್ಲಿ ಸಿಪಿಐ ಪಕ್ಷವು ಪಿಎಫ್‌ಐ ಮತ್ತು ಎಸ್ಡಿಪಿಐಯೊಂದಿಗೆ ಇಲು-ಇಲು ನಡೆಸುತ್ತಿದೆ: ಅಮಿತ್‌ ಶಾ

Update: 2021-03-07 17:44 GMT

ತಿರುವನಂತಪುರಂ: ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷಗಳು ಭರಪೂರ ಪ್ರಚಾರವನ್ನು ನಡೆಸುತ್ತಿದೆ. ಇಂದು ತಿರುವನಂತಪುರಂನಲ್ಲಿ ನಡೆದ ಬೃಹತ್‌ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಆಡಳಿತ ಪಕ್ಷದ ವಿರುದ್ಧ ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

"ಎಲ್‌ʼಡಿಎಫ್‌ ಮತ್ತು ಯುಡಿಎಫ್‌ ಗೆ ಭಾರತ ದೇಶದ ಕುರಿತಾದಂತೆ ಯಾವುದೇ ಕಾಳಜಿಯಿಲ್ಲ. ಅವರಿಗೆ ಬೇಕಾಗಿರುವುದು ವೋಟ್‌ ಬ್ಯಾಂಕ್‌ ಮಾತ್ರ. ಇಲ್ಲಿರುವ ಸಿಪಿಐ ಪಕ್ಷವು ಎಸ್ಡಿಪಿಐ ಮತ್ತು ಪಿಎಫ್‌ಐ ಸಂಘಟನೆಯೊಂದಿಗೆ ಇಲು-ಇಲು ಮಾಡುತ್ತಿದೆ. ಕಾಂಗ್ರೆಸ್‌ ಪಕ್ಷವು ಮುಸ್ಲಿಮ್‌ ಲೀಗ್‌ ಅನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ನನಗೆ ಕಾಂಗ್ರೆಸ್‌ ಅನ್ನು ಅರ್ಥೈಸಲೇ ಸಾಧ್ಯವಾಗುತ್ತಿಲ್ಲ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

"ಪಶ್ವಿಮ ಬಂಗಾಳದಲ್ಲಿ ಕಾಂಗ್ರೆಸ್‌ ಪಕ್ಷವು ಕಮ್ಯೂನಿಸ್ಟ್‌ ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇಲ್ಲಿ ಪರಸ್ಪರ ಕಾದಾಡುತ್ತಿದ್ದಾರೆ. ಕೇರಳದಲಲಿ ಇವರು ಮುಸ್ಲಿಂ ಲೀಗ್‌ ನೊಂದಿಗೆ ಸೇರಿದ್ದಾರೆ. ಬಂಗಾಳದಲ್ಲಿ ಕಾಂಗ್ರೆಸ್‌ ಮುಸ್ಲಿಮ ಫುರ್ಫುರಾ ಶರೀಫ್‌ ನೊಂದಿಗೆ ಸೇರಿಕೊಂಡಿದೆ. ಮಹಾರಾಷ್ಟ್ರದಲ್ಲಿ ಅವರು ಶಿವಸೇನೆಯೊಂದಿಗಿದ್ದಾರೆ. ನಿಮ್ಮ ನಿಜವಾದ ದಿಕ್ಕು ಯಾವುದು? ಎಂದು ಅಮಿತ್‌ ಶಾ ಪ್ರಶ್ನಿಸಿದ್ದಾರೆ.

ತಿರುವನಂತಪುರಂನಲ್ಲಿ ನಡೆದ ರ್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದು, ಕರ್ನಾಟಕ ಉಪಮುಖ್ಯಮಂತ್ರಿ ಅಶ್ವಥ್‌ ನಾರಾಯಣ್‌, ಪ್ರಹ್ಲಾದ್‌ ಜೋಶಿ, ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್‌, ಕುಮ್ಮನಮ್‌ ರಾಜಶೇಖರನ್‌ ಹಾಗೂ ಇನ್ನಿತರ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News