"ನನಗೆ ಬದುಕುವುದೇ ಬೇಡವಾಗಿತ್ತು": ರಾಜಮನೆತನದಲ್ಲಿದ್ದ ಸಂದರ್ಭದ ನೆನಪುಗಳನ್ನು ಹೊರಹಾಕಿದ ಮೇಗನ್ ಮಾರ್ಕೆಲ್

Update: 2021-03-08 09:43 GMT

ನ್ಯೂಯಾರ್ಕ್: ಬ್ರಿಟನ್ ರಾಜಮನೆತನದಿಂದ ಬಹಳಷ್ಟು ಸಮಯದ ಹಿಂದೆಯೇ ಹೊರಬಂದಿರುವ ಯುವರಾಜ ಹ್ಯಾರಿ ಮತ್ತವರ ಪತ್ನಿ ಹಾಗೂ ಮಾಜಿ ನಟಿ ಮೇಗನ್ ಮಾರ್ಕೆಲ್ ಒಪ್ರಾ ವಿನ್‍ ಫ್ರೇ ಸಂದರ್ಶನದಲ್ಲಿ ಹಲವು ಅಚ್ಚರಿಯ ಮಾಹಿತಿಗಳನ್ನು ಹೊರಗೆಡಹಿದ್ದಾರೆ.

"ಬದುಕಬೇಕೆಂಬ ಇಚ್ಛೆಯೇ ಇರಲಿಲ್ಲ" ಎಂದು ತಮ್ಮ ಮನಸ್ಸಿನ ನೋವನ್ನು 39 ವರ್ಷದ ಮೇಗನ್ ಸಂದರ್ಶನದಲ್ಲಿ ತೋಡಿಕೊಂಡಿದ್ದಾರೆ.  "ನನಗೆ ಗೊತ್ತು ನಾನು ಅದನ್ನು ಹೇಳದೇ ಇದ್ದರೆ ನಾನು ಅದನ್ನು ಮಾಡುತ್ತೇನೆಂದು ನನಗೆ ಗೊತ್ತಿತ್ತು.  ನನಗೆ ಇನ್ನು ಬದುಕಬೇಕೆಂದೇ ಇಚ್ಛೆಯಿರಲಿಲ್ಲ. ಇದೊಂದು ಸ್ಪಷ್ಟ ಹಾಗೂ ಭಯ ಮೂಡಿಸುವ  ಯೋಚನೆಯಾಗಿತ್ತು," ಎಂದು ಅವರು ಹೇಳಿದರು. ಬ್ರಿಟಿಷ್ ಮಾಧ್ಯಮಗಳು ತಮ್ಮನ್ನು ಬಿಂಬಿಸಿದ ರೀತಿ ಹಾಗೂ ರಾಜಮನೆತನ ತಮ್ಮ ಬಗ್ಗೆ ಹೊಂದಿದ್ದ ಅಭಿಪ್ರಾಯಗಳಿಂದ ಅವರು ಬಹಳಷ್ಟು ನೊಂದಿದ್ದರು ಎಂದು ಈ ಮೂಲಕ ಮೇಗನ್ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

ಮೊದಲ ಬಾರಿ ಗರ್ಭವತಿಯಾದಂತಹ ಸಂದರ್ಭದಲ್ಲಿ ಇಂತಹ ಆತ್ಮಹತ್ಯೆ ಕುರಿತಾದ ಯೋಚನೆಗಳಿದ್ದವೇ ಎಂದು ಕೇಳಿದಾಗ "ಹೌದು, ಅದು ಬಹಳ ಬಹಳ ಸ್ಪಷ್ಟ" ಎಂದರು.

"ನನಗೆ ಮಾನಸಿಕ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಅರಮನೆಯ ಅತ್ಯಂತ ಹಿರಿಯರ ಬಳಿ ಸಹಾಯಕ್ಕಾಗಿ ಹೋದೆ, ಆದರೆ ನಾನು ಹಾಗೆ ಮಾಡಲು ಸಾಧ್ಯವಿಲ್ಲ, ಅದು ಸಂಸ್ಥೆಗೆ ಮತ್ತು ರಾಜಮನೆತನಕ್ಕೆ ಒಳ್ಳೆಯದಲ್ಲ ಎಂದು ನನಗೆ ಹೇಳಲಾಯಿತು" ಎಂದು ಅವರು ನೆನಪಿಸಿಕೊಂಡಿದ್ದಾರೆ.

"ನನ್ನ ಇನ್ನೂ ಹುಟ್ಟದೇ ಇದ್ದ ಮಗನ ಚರ್ಮದ ಬಣ್ಣದ ಬಗ್ಗೆ ರಾಜಮನೆತನಕ್ಕೆ ಆತಂಕವಿತ್ತು ಎಂಬುದನ್ನು  ಹ್ಯಾರಿ ಹೇಳಿದ್ದರು" ಎಂದು ಮೇಗನ್ ಹೇಳಿಕೊಂಡರು.

ʼಆತ ತುಂಬ ಕಂದು ಬಣ್ಣದವನಾಗಬಹುದೆಂಬʼ ಆತಂಕವಿತ್ತೇ ಎಂದು ವಿನ್‍ಫ್ರೇ ಕೇಳಿದಾಗ "ನೀವು ಹಾಗೆಂದು  ಅಂದುಕೊಳ್ಳುವುದಾದರೆ ಅದು ಸಾಕಷ್ಟು ಸುರಕ್ಷಿತವೆನಿಸುತ್ತದೆ" ಎಂದು ಮೇಗನ್ ಹೇಳಿದರು.

ತಮ್ಮ ಜೀವನದಲ್ಲಿ ಮಾನಸಿಕ ಯಾತನೆ ಅನುಭವಿಸಿದ ಸಂದರ್ಭ ತಂದೆ ರಾಜಕುಮಾರ ಚಾರ್ಲ್ಸ್ ತಮ್ಮ ಸಹಾಯಕ್ಕೆ ನಿಂತಿರಲಿಲ್ಲ ಎಂದು ಸಂದರ್ಶನದಲ್ಲಿ ನೆನಪಿಸಿಕೊಂಡ ಹ್ಯಾರಿ, ಈಗ ತಾವಿಬ್ಬರು ಮಾತನಾಡುತ್ತಿರುವುದಾಗಿ ಹೇಳಿದರು.

ಸಂದರ್ಶನದ ವೇಳೆ ದಂಪತಿಗಳು ತಮ್ಮ ಎರಡನೆಯ ಮಗುವಿನ ಕುರಿತು ಮಾತನಾಡಿ ʼಇಟ್ಸ್ ಎ ಗರ್ಲ್ʼ ಎಂದರಲ್ಲದೆ  ಬೇಸಿಗೆ ಸಮಯದಲ್ಲಿ ಆಕೆ ಜನಿಸಬಹುದು ಎಂದರು. ಎರಡು ಮಕ್ಕಳು ಮಾತ್ರವೇ ಎಂದು ಕೇಳಿದಾಗ ಹ್ಯಾರಿ `ಡನ್' ಎಂದು ಉತ್ತರಿಸಿದರಲ್ಲದೆ "ಒಂದು ಗಂಡು ಮಗು ಹಾಗೂ ಇನ್ನೊಂದು ಹೆಣ್ಣಾದರೆ ಅದಕ್ಕಿಂತ ಹೆಚ್ಚೇನು ಬೇಕು?" ಎಂದು ಕೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News