ಇಂಧನ ದರ ಹೆಚ್ಚಳಕ್ಕೆ ವಿಪಕ್ಷಗಳ ಪ್ರತಿಭಟನೆ: ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ

Update: 2021-03-08 14:47 GMT

ಹೊಸದಿಲ್ಲಿ, ಮಾ.8: ಕಳೆದ ಕೆಲ ವಾರಗಳಿಂದ ಇಂಧನ ದರ ನಿರಂತರ ಹೆಚ್ಚುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಈ ಬಗ್ಗೆ ಚರ್ಚೆಗೆ ಪಟ್ಟು ಹಿಡಿದಿದ್ದರಿಂದ ಸೋಮವಾರ ರಾಜ್ಯಸಭೆಯ ಕಲಾಪವನ್ನು ಮೂರು ಬಾರಿ ಮುಂದೂಡಿದ ಬಳಿಕ ಅಂತಿಮವಾಗಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

ಸೋಮವಾರ ಆರಂಭವಾದ ಬಜೆಟ್ ಅಧಿವೇಶನದ ದ್ವಿತೀಯ ಹಂತದ ಕಲಾಪದ ಸಂದರ್ಭ ಸೆಕ್ಷನ್ 267ರಡಿ ನೋಟಿಸ್ ನೀಡಿದ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಲ್‌ಪಿಜಿ, ಇಂಧನ ದರದಲ್ಲಿ ನಿರಂತರ ಹೆಚ್ಚಳವಾಗುತ್ತಿದ್ದು ಸದನದ ಇತರ ಕಲಾಪಗಳ ಬದಲು ಈ ಜ್ವಲಂತ ಸಮಸ್ಯೆಯ ಬಗ್ಗೆ ರಾಜ್ಯಸಭೆಯಲ್ಲಿ ಮೊದಲು ಚರ್ಚೆ ನಡೆಯಲಿ ಎಂದು ಆಗ್ರಹಿಸಿದರು. ಆದರೆ ಈ ನೋಟಿಸ್ ಅನ್ನು ಪರಿಗಣಿಸಲು ನಿರಾಕರಿಸಿದ ಸಭಾಧ್ಯಕ್ಷ ಎಂ ವೆಂಕಯ್ಯ ನಾಯ್ಡು, ಈ ವಿಷಯವನ್ನು ಸಂಬಂಧಿತ ವಿಧೇಯಕಗಳ ಕುರಿತ ಚರ್ಚೆ ಸಂದರ್ಭ ಎತ್ತಬಹುದು. ಆಗ ಅವಕಾಶ ಮಾಡಿಕೊಡಲಾಗುವುದು. ಈಗ ನಿಗದಿತ ರೀತಿಯಲ್ಲೇ ಕಲಾಪ ನಡೆಯಲಿದೆ ಎಂದರು.

ಇದನ್ನು ಒಪ್ಪದ ವಿಪಕ್ಷ ಸದಸ್ಯರು ಇಂಧನ ದರ ಹೆಚ್ಚಳ ವಿರೋಧಿಸಿ ಘೋಷಣೆ ಕೂಗಲಾರಂಭಿಸಿದರು. ವೆಂಕಯ್ಯನಾಯ್ಡು ಮನವಿ ಮಾಡಿಕೊಂಡ ಬಳಿಕವೂ ಘೋಷಣೆ ಮುಂದುವರಿದ ಹಿನ್ನೆಲೆಯಲ್ಲಿ ಕಲಾಪವನ್ನು 20 ನಿಮಿಷ ಮುಂದೂಡಲಾಯಿತು. ವಿರಾಮದ ಬಳಿಕವೂ ವಿಪಕ್ಷ ಸದಸ್ಯರ ಪ್ರತಿಭಟನೆ ಮುಂದುವರಿದ ಕಾರಣ ಮತ್ತೆ 15 ನಿಮಿಷ, ಆ ಬಳಿಕ ಮಧ್ಯಾಹ್ನ 1 ಗಂಟೆಗೆ ಮುಂದೂಡಲಾಯಿತು.

ಈ ಮಧ್ಯೆ, ಸದನದ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕೊರೋನ ಸೋಂಕಿನ ಸಮಸ್ಯೆಯ ಬಳಿಕ ಇಂಧನ ದರ ಹಾಗೂ ಎಲ್‌ಪಿಜಿ ದರದ ತೀವ್ರ ಹೆಚ್ಚಳದಿಂದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪೆಟ್ರೋಲ್ ಬೆಲೆ ಲೀಟರ್‌ಗೆ ಸುಮಾರು 100 ರೂ, ಡೀಸೆಲ್ ಬೆಲೆ 80 ರೂ.ಗೆ ಏರಿದೆ. 2014ರಿಂದ ಅಬಕಾರಿ ಸುಂಕದ ರೂಪದಲ್ಲಿ 21 ಲಕ್ಷ ಕೋಟಿ ರೂ.ಯನ್ನು ಕೇಂದ್ರ ಸರಕಾರ ಸಂಗ್ರಹಿಸಿದೆ. ಇದರಿಂದಾಗಿ ಬೆಲೆ ಗಗನಕ್ಕೇರಿದ್ದು ಇಡೀ ದೇಶವೇ ತೊಂದರೆಗೆ ಒಳಗಾಗಿದೆ. ಆದ್ದರಿಂದ ಈ ಸಮಸ್ಯೆಯ ಬಗ್ಗೆ ಮೊದಲು ಸದನದಲ್ಲಿ ಚರ್ಚೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಮಧ್ಯಾಹ್ನ 1 ಗಂಟೆಗೆ ಸದನ ಮೂರನೇ ಬಾರಿ ಸೇರಿದಾಗಲೂ ವಿಪಕ್ಷ ಸದಸ್ಯರು ಇಂಧನ ದರ ಏರಿಕೆಯ ಬಗ್ಗೆ ಮೊದಲು ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದಿದ್ದರಿಂದ ದಿನದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡುವುದಾಗಿ ಸಭಾಧ್ಯಕ್ಷರು ಪ್ರಕಟಿಸಿದರು. ಮಂಗಳವಾರದಿಂದ ರಾಜ್ಯಸಭೆಯ ಕಲಾಪ ಈ ಹಿಂದಿನಂತೆಯೇ ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ, ಲೋಕಸಭೆಯ ಕಲಾಪ ಈ ಹಿಂದಿನಂತೆಯೇ ಬೆಳಿಗ್ಗೆ 11ರಿಂದ ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ. ಕೊರೋನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯಸಭೆ ಕಲಾಪವನ್ನು ಅಧಿವೇಶನದ ಸಂದರ್ಭ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2ರವರೆಗೆ, ಲೋಕಸಭೆ ಕಲಾಪವನ್ನು ಮಧ್ಯಾಹ್ನ 4 ಗಂಟೆಯಿಂದ 10ರವರೆಗೆ ನಿಗದಿಗೊಳಿಸಲಾಗಿತ್ತು. ಸಂಸತ್ ಭವನದ ಆವರಣದಲ್ಲಿ ಸಂಸದರಿಗಾಗಿ ಕೋವಿಡ್-19 ಲಸಿಕೆ ಕೇಂದ್ರ ಆರಂಭಿಸಿರುವುದಾಗಿ ಲೋಕಸಭೆಯ ಬುಲೆಟಿನ್ ಹೇಳಿದೆ.

ಈ ಮಧ್ಯೆ, ಐದು ರಾಜ್ಯಗಳಲ್ಲಿ ಮಾರ್ಚ್ 27ರಿಂದ ಎಪ್ರಿಲ್ 29ರವರೆಗೆ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಟಿಎಂಸಿ ಸಂಸದರಾದ ಸುದೀಪ್ ಬಂಡೋಪಾಧ್ಯಾಯ ಮತ್ತು ಡೆರೆಕ್ ಒ’ಬ್ರಿಯಾನ್ ಸಹಿತ ಹಲವು ಸಂಸದರು ಪತ್ರ ಬರೆದಿರುವುದರಿಂದ ಬಜೆಟ್ ಅಧಿವೇಶನವನ್ನು ನಿಗದಿತ ಅವಧಿಗೆ ಮೊದಲೇ ಮುಕ್ತಾಯಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News