ದೇಶದಲ್ಲಿ ಹಣ್ಣು, ತರಕಾರಿ ಬಂಪರ್ ಬೆಳೆ ನಿರೀಕ್ಷೆ
ಹೊಸದಿಲ್ಲಿ, ಮಾ.9: ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಉದ್ಭವಿಸಿದ ಸವಾಲಿನ ಸ್ಥಿತಿಯ ನಡುವೆಯೂ ದೇಶದ ಆಹಾರಧಾನ್ಯ ಉತ್ಪಾದನೆ ಹೆಚ್ಚಿರುವ ನಡುವೆಯೇ ಹಣ್ಣು ಮತ್ತು ತರಕಾರಿ ಸೇರಿ ತೋಟಗಾರಿಕಾ ಉತ್ಪನ್ನಗಳು ಕೂಡಾ ಬಂಪರ್ ಬೆಳೆಯ ನಿರೀಕ್ಷೆಯಲ್ಲಿವೆ. ದೇಶದಲ್ಲಿ 2020-21ನೇ ವರ್ಷದಲ್ಲಿ ಸಾರ್ವಕಾಲಿಕ ದಾಖಲೆ ಎನಿಸಿದ 372 ದಶಲಕ್ಷ ಟನ್ ಹಣ್ಣು- ತರಕಾರಿ ಉತ್ಪಾದನೆಯಾಗುವ ನಿರೀಕ್ಷೆ ಇದ್ದು, ಹಣ್ಣು ಮತ್ತು ತರಕಾರಿ ವಲಯದಲ್ಲಿ ಕ್ರಮವಾಗಿ ಮಾವು ಮತ್ತು ಆಲೂಗಡ್ಡೆ ಅಗ್ರಸ್ಥಾನದಲ್ಲಿವೆ.
2020ರ ಜುಲೈನಿಂದ 2021ರ ಜೂನ್ ಅವಧಿಯ ತೋಟಗಾರಿಕಾ ಬೆಳೆಗಳ ಅಂದಾಜನ್ನು ಸೋಮವಾರ ಬಿಡುಗಡೆ ಮಾಡಲಾಗಿದ್ದು, 2019-20ಕ್ಕೆ ಹೋಲಿಸಿದರೆ ಹಣ್ಣು, ತರಕಾರಿ, ಸುಗಂಧಿತ ಸದಸ್ಯ ಮತ್ತು ಔಷಧೀಯ ಸಸ್ಯ ಹಾಗೂ ಪ್ಲಾಂಟೇಶನ್ ಬೆಳೆ ಶೇಕಡ 2ರಷ್ಟು ಹೆಚ್ಚುವ ನಿರೀಕ್ಷೆ ಇದೆ. ಆದರೆ ಸಾಂಬಾರ ಪದಾರ್ಥ ಹಾಗೂ ಹೂವಿನ ಇಳುವರಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಲಿದೆ.
ದೇಶದಲ್ಲಿ ಹಣ್ಣು ಮತ್ತು ತರಕಾರಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೋಟಗಾರಿಕಾ ಕ್ಷೇತ್ರದ ಬೆಳೆ ಪ್ರದೇಶ ಕೂಡಾ ನಿರಂತರವಾಗಿ ಹೆಚ್ಚುತ್ತಿದೆ. ಆಲೂಗಡ್ಡೆ ಉತ್ಪಾದನೆ ಶೇಕಡ 10ರಷ್ಟು ಹೆಚ್ಚಿದ್ದು, ಒಟ್ಟಾರೆ ತರಕಾರಿ ಉತ್ಪಾದನೆ ಕಳೆದ ವರ್ಷಕ್ಕೆ ಹೋಲಿಸಿದರೆ 50 ಲಕ್ಷ ಟನ್ ಅಧಿಕವಾಗಿ 194 ದಶಲಕ್ಷ ಟನ್‌ಗೆ ಹೆಚ್ಚುವ ನಿರೀಕ್ಷೆ ಇದೆ. ಟೊಮ್ಯಾಟೊ, ಈರುಳ್ಳಿ ಹಾಗೂ ಆಲೂಗಡ್ಡೆ ಉತ್ಪಾದನೆ ಅಲ್ಪ ಏರಿಕೆ ಕಂಡಿದೆ.
ಮಾವು ಉತ್ಪಾದನೆ ಶೇಕಡ 4ರಷ್ಟು ಹೆಚ್ಚಿ 21 ದಶಲಕ್ಷ ಟನ್ ಆಗಲಿದೆ. ಒಟ್ಟಾರೆ ಹಣ್ಣಿನ ಉತ್ಪಾದನೆ ಕಳೆದ ವರ್ಷಕ್ಕಿಂತ 10 ಲಕ್ಷ ಟನ್ ಅಧಿಕವಾಗಿ 103 ದಶಲಕ್ಷ ಟನ್ ತಲುಪಲಿದೆ. ಬಾಳೆಹಣ್ಣು ಉತ್ಪಾದನೆ 33.7 ದಶಲಕ್ಷ ಟನ್‌ಗೆ ಹೆಚ್ಚಲಿದ್ದು, ಇದು 2019-20ರ ಸಾಲಿಗೆ ಹೋಲಿಸಿದರೆ 15 ಲಕ್ಷ ಟನ್ ಅಧಿಕ.