ಕುಟುಂಬದ ಗೃಹಿಣಿಗೆ ಪ್ರತಿ ತಿಂಗಳು 1,500 ರೂ.: ಎಐಎಡಿಎಂಕೆ ಭರವಸೆ

Update: 2021-03-09 07:25 GMT

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಮುಂಬರುವ ವಿಧಾನಸಭಾ ಚುನಾವಣೆಯ ತನ್ನ ಭರವಸೆಯ ಭಾಗವಾಗಿ ಮನೆಯ ಗೃಹಿಣಿಗೆ ಪ್ರತಿ ತಿಂಗಳು 1500 ರೂ. ನೀಡುವುದಾಗಿ ಭರವಸೆ ನೀಡಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಗೃಹಿಣಿಗೆ ಪ್ರತಿ ತಿಂಗಳು 1,000 ರೂ.ನೀಡುವುದಾಗಿ ಡಿಎಂಕೆ ಪಕ್ಷ ಭರವಸೆ ನೀಡಿದ ಬಳಿಕ ಎಐಎಡಿಎಂಕೆ ಕೂಡ ಮಹಿಳೆಯರ ಮತ ಸೆಳೆಯುವ ತಂತ್ರ ಹೂಡಿದೆ.

ವಿಶ್ವ ಮಹಿಳಾ ದಿನವಾಗಿರುವ ಮಾ. 8ರಂದು ಎಐಎಡಿಎಂಕೆ ನಾಯಕ ಹಾಗೂ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಈ ಘೋಷಣೆ ಮಾಡಿದ್ದು, ವರ್ಷಕ್ಕೆ ಕುಟುಂಬವೊಂದಕ್ಕೆ ಆರು ಅಡುಗೆ ಅನಿಲ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲಾಗುವುದು ಎಂದೂ ಭರವಸೆ ನೀಡಿದ್ದಾರೆ.ಆದರೆ ಈ ಯೋಜನೆಯ ಲಾಭ ಪಡೆಯಲು ಯಾವುದೇ ಮಾನದಂಡಗಳನ್ನು ನಿರ್ದಿಷ್ಟಪಡಿಸಿಲ್ಲ.

ಎಪ್ರಿಲ್ 6ರಂದು ನಡೆಯಲಿರುವ ಚುನಾವಣೆಗೆ ಎಐಎಡಿಎಂಕೆ ಶೀಘ್ರವೇ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದು, ಜನರಿಗಾಗಿ ಹಲವು ತೃಪ್ತಿದಾಯಕ ಯೋಜನೆಯನ್ನು ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಟಿಯೊಂದರಲ್ಲಿ ತಿಳಿಸಿದರು.

ಸಮಾಜದಲ್ಲಿ ಆರ್ಥಿಕತೆ ಸಮಾನತೆಯನ್ನು ದೃಢಪಡಿಸಲು ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 1500 ರೂ.ವನ್ನು ಕುಟುಂಬದ ಗೃಹಿಣಿಗೆ ಹಸ್ತಾಂತರಿಸಲಾಗುವುದು ಎಂದು ಪಳನಿಸ್ವಾಮಿ ಆಶ್ವಾಸನೆ ನೀಡಿದರು. 

ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಕುಟುಂಬದ ಮಹಿಳೆಯೊಬ್ಬರಿಗೆ ಪ್ರತಿ ತಿಂಗಳು 1000 ರೂ. ನೀಡುವುದಾಗಿ ಈಗಾಗಲೇ ಪ್ರಕಟಿಸಿದ್ದು, ನೀವು ಡಿಎಂಕೆಯನ್ನು ನಕಲಿ ಮಾಡಿದ್ದೀರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಪಳನಿಸ್ವಾಮಿ, ಇದು ತಪ್ಪು. ಎಐಎಡಿಎಂಕೆ ಪ್ರಸ್ತಾವವನ್ನು ಯಾರೋ ಸೋರಿಕೆ ಮಾಡಿದ್ದು, ಇದನ್ನು ಆಧರಿಸಿ ಸ್ಟಾಲಿನ್ ಅವರು ರವಿವಾರ ಘೋಷಣೆ ಮಾಡಿದ್ದಾರೆ ಎಂದು ಉತ್ತರಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News