ಕಚೇರಿಯ ಮೇಲೆ ಪೊಲೀಸ್ ದಾಳಿ ನಡೆಸಿದ್ದು ಸಂಪೂರ್ಣ ಕಾನೂನು ಬಾಹಿರ: ಮೆಹಮೂದ್ ಪ್ರಾಚಾ
ಹೊಸದಿಲ್ಲಿ, ಮಾ. 9: ಹೊಸದಿಲ್ಲಿಯಲ್ಲಿ 2020 ಫೆಬ್ರವರಿಯಲ್ಲಿ ಸಂಭವಿಸಿದ ಕೋಮು ಹಿಂಸಾಚಾರದ ಹಲವು ಆರೋಪಿಗಳ ಪರವಾಗಿ ಕಾನೂನು ಹೋರಾಟ ನಡೆಸುತ್ತಿರುವ ನ್ಯಾಯವಾದಿ ಮೆಹಮೂದ್ ಪ್ರಾಚಾ ಅವರ ಕಚೇರಿ ಮೇಲೆ ದಿಲ್ಲಿ ಪೊಲೀಸರ ವಿಶೇಷ ಘಟಕ ಮಂಗಳವಾರ ದಾಳಿ ನಡೆಸಿದೆ.
ಪ್ರಾಚಾ ಅವರ ಕಚೇರಿ ಮೇಲೆ ಡಿಸೆಂಬರ್‌ನಲ್ಲಿ ಕೂಡ ಪೊಲೀಸರು ದಾಳಿ ನಡೆಸಿದ್ದರು. ‘‘ದಾಳಿ ನಡೆಯುವ ಸಂದರ್ಭ ನಾನು ಹಾಗೂ ನನ್ನ ಸಹವರ್ತಿಗಳು ಕಚೇರಿಯಲ್ಲಿ ಇರಲಿಲ್ಲ. ನಮ್ಮ ಕಚೇರಿಗೆ ಬೀಗ ಹಾಕಲಾಗಿತ್ತು. ವಿಶೇಷ ಘಟಕದ ಪ್ರಕರಣವೊಂದರಲ್ಲಿ ಹಿರಿಯ ತನಿಖಾಧಿಕಾರಿಯೊಬ್ಬರನ್ನು ಪಾಟಿ ಸವಾಲನ್ನು ನಡೆಸಲಿರುವುರಿಂದ ನಾನು ಕಚೇರಿಯಲ್ಲಿ ಇರುವುದಿಲ್ಲ ಎಂದು ಅವರಿಗೆ (ಪೊಲೀಸರಿಗೆ) ತಿಳಿದಿತ್ತು.
ನಾನು ಕಚೇರಿಯಲ್ಲಿ ಇರದ ದಿನವನ್ನೇ ಅವರು ಆಯ್ಕೆ ಮಾಡಿಕೊಂಡಿದ್ದಾರೆ’’ ಎಂದು ಪ್ರಾಚಾ ತಿಳಿಸಿದ್ದಾರೆ. ಕಚೇರಿ ಮೇಲೆ 100ಕ್ಕೂ ಅಧಿಕ ಪೊಲೀಸರು ದಾಳಿ ನಡೆಸಿದರು. ಶೋಧ ಕಾರ್ಯಾಚರಣೆ ಅಪರಾಹ್ನ 12.30ಕ್ಕೆ ಆರಂಭಗೊಂಡಿತು ಎಂದು ಪ್ರಾಚಾ ಅವರ ಕಚೇರಿಯ ಗುರುತು ಬಹಿರಂಗಪಡಿಸದ ಸಹವರ್ತಿಯೊಬ್ಬರು ಗೆ ತಿಳಿಸಿದ್ದಾರೆ.
‘‘ಅವರಿಗೆ ಲ್ಯಾಪ್‌ಟಾಪ್ಸ್ ಹಾಗೂ ಕಂಪ್ಯೂಟರ್‌ಗಳು ಬೇಕಿತ್ತು. ನಮ್ಮ ಈಮೇಲ್ ಐಡಿಯಿಂದ ಇಮೇಲ್ ಕಳುಹಿಸಿದ್ದೇವೆ ಎಂದು ನಾವು ಹೇಳುತ್ತಿರುವಾಗ ಅವರ ನಮಗೆ ಈಮೇಲ್‌ನ ಕೆಲವು ಮೆಟಾ ಡಾಟಾಗಳ ಅಗತ್ಯ ಇದೆ ಎಂದು ಹೇಳುತ್ತಿದ್ದರು. ಅದಕ್ಕಾಗಿ ಎಲ್ಲ ಕಂಪ್ಯೂಟರ್‌ಗಳನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಅವರು ಹೇಳುತ್ತಿದ್ದಾರೆ’’ ಎಂದು ಅವರು ಹೇಳಿದ್ದಾರೆ. ಡಿಸೆಂಬರ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿ ಪ್ರಾಚಾ, ಆಗ ಪೊಲೀಸರು ತನ್ನ ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡರು. ಈ ನಡುವೆ ಪೊಲೀಸರು ತಾವು ದೋಷಾರೋಪಣೆ ದಾಖಲೆಗಳನ್ನು ಹಾಗೂ ಪ್ರಾಚಾ ಸಂಸ್ಥೆಯ ಅಧಿಕೃತ ಈಮೇಲ್ ವಿಳಾಸದ ಔಟ್‌ಬಾಕ್ಸ್‌ನ ಮೆಟಾಡಾಟಕ್ಕೆ ಶೋಧ ನಡೆಸುತ್ತಿದ್ದೇವೆ ಎಂದು ಹೇಳಿದ್ದರು ಎಂದರು.
ನ್ಯಾಯಾಲಯದ ಮೆಟ್ಟಿಲೇರಿದ ಪ್ರಾಚಾ
ತನ್ನ ಕಚೇರಿ ಮೇಲೆ ಪೊಲೀಸರು ನಡೆಸಿದ ದಾಳಿಗೆ ಸಂಬಂಧಿಸಿ ಪ್ರಾಚಾ ಅವರು ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ‘‘ದಿಲ್ಲಿ ಪೊಲೀಸರು ಕಂಪ್ಯೂಟರ್‌ನ ಹಾರ್ಡ್ ಡಿಸ್ಕ್ ಅನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಆಗ್ರಹಿಸುತ್ತಿರುವುದು ಕಾನೂನು ಬಾಹಿರ ಹಾಗೂ ನ್ಯಾಯಸಮ್ಮತವಲ್ಲದ್ದು. ಈ ಹಿಂದೆ ನಡೆಸಿದ ದಾಳಿ ಸಂದರ್ಭ ವಶಪಡಿಸಿಕೊಂಡಿರುವ ದಾಖಲೆಗಳನ್ನೇ ಅಧಿಕಾರಿಗಳು ಮತ್ತೆ ಕೇಳುತ್ತಿದ್ದಾರೆ’’ ಎಂದು ಅವರು ಹೇಳಿದ್ದಾರೆ. ಬುಧವಾರ ಬೆಳಗ್ಗೆ 10.30ಕ್ಕೆ ನ್ಯಾಯಾಲಯದಲ್ಲಿ ಹಾಜರಿರುವಂತೆ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಪಂಕಜ್ ಶರ್ಮಾ ಅವರು ತನಿಖಾಧಿಕಾರಿ ಹಾಗೂ ವಿಶೇಷ ಘಟಕದ ಪೊಲೀಸ್ ಉಪ ಆಯುಕ್ತರಿಗೆ ನಿರ್ದೇಶಿಸಿದ್ದಾರೆ.