ಸಿಟ್‌ನಿಂದ ಸಂಸದ ಮೋಹನ್ ಡೆಲ್ಕರ್ ಸಾವು ಪ್ರಕರಣದ ತನಿಖೆ: ಮಹಾರಾಷ್ಟ್ರ ಗೃಹ ಸಚಿವ

Update: 2021-03-09 18:14 GMT
Photo: twitter.com/MohanDelkar

ಮುಂಬೈ, ಮಾ. 9: ದಾದ್ರಾ ಹಾಗೂ ನಗರ್ ಹವೇಲಿಯ ಲೋಕಸಭೆಯ ಪಕ್ಷೇತರ ಸಂಸದ ಮೋಹನ್ ಡೆಲ್ಕರ್ ಅವರ ಸಾವಿನ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರೂಪಿಸಲಾಗಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಮಂಗಳವಾರ ಹೇಳಿದ್ದಾರೆ.

ವಿಧಾನ ಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಕೇಂದ್ರಾಡಳಿತ ಪ್ರದೇಶ ದಾದ್ರ ಹಾಗೂ ನಗರ್‌ಹವೇಲಿಯ ಆಡಳಿತಗಾರ ಪ್ರಫುಲ್ ಪಟೇಲ್ ಅವರು ಡೆಲ್ಕರ್ ಅವರಿಗೆ ಬೆದರಿಕೆ ಒಡ್ಡಿರುವುದನ್ನು ಆತ್ಮಹತ್ಯಾ ಪತ್ರ ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ. ಸಂಸತ್ತಿನ ಕೆಳ ಮನೆಯಲ್ಲಿ 7 ಅವಧಿ ಸದಸ್ಯರಾಗಿದ್ದ ಡೆಲ್ಕರ್ ಅವರ ಮೃತದೇಹ ದಕ್ಷಿಣ ಮುಂಬೈಯ ಮರೈನ್ ಡ್ರೈವ್‌ನ ಹೊಟೇಲೊಂದರಲ್ಲಿ ಫೆಬ್ರವರಿ 22ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

‘‘ನೇಣು ಹಾಕಿಕೊಂಡಿರುವುದರಿಂದ ಸಾವು ಸಂಭವಿಸಿದೆ. ಹೊಟೇಲ್‌ನ ಕೊಠಡಿಯಲ್ಲಿ ಆತ್ಮಹತ್ಯೆ ಪತ್ರ ದೊರೆತಿದೆ’’ ಎಂದು ಮುಂಬೈ ಪೊಲೀಸರು ಹೇಳಿದ್ದರು. ವಿಧಿವಿಜ್ಞಾನ ತಜ್ಞರ ತಂಡ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿತ್ತು ಹಾಗೂ ಪರಿಶೀಲನೆ ನಡೆಸಿತ್ತು. ವೈದ್ಯರ ತಂಡವೊಂದು ಸರ್ ಜೆ.ಜೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿತ್ತು ಹಾಗೂ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿತ್ತು.

ಈ ಪ್ರಕರಣದಲ್ಲಿ ಬಿಜೆಪಿಯ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಕಾಂಗ್ರೆಸ್ ಪೆಬ್ರವರಿ 23ರಂದು ಆಗ್ರಹಿಸಿತ್ತು. ಡೆಲ್ಕರ್ ಆತ್ಮಹತ್ಯಾ ಪತ್ರದಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ರಾಜ್ಯ ಸರಕಾರದಲ್ಲಿ ಮಾರ್ಚ್ 2ರಂದು ಮನವಿ ಮಾಡಿದ್ದರು. ಈ ನಡುವೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಈ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಸೋಮವಾರ ಘೋಷಿಸಿದ್ದರು. ಈ ಪ್ರಕರಣಕ್ಕೆ ಸರಕಾರ ತಾರ್ಕಿಕ ಅಂತ್ಯ ನೀಡಲಿದೆ ಎಂದು ಕೂಡ ಅವರು ಹೇಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News