ಸರಕಾರದ ಬೆಲೆ ಏರಿಕೆ ವಿರುದ್ಧ ಸಿಪಿಎಂ ಪ್ರಚಾರ -ಬಹಿರಂಗ ಸಭೆ

Update: 2021-03-10 16:20 GMT

ಬೈಂದೂರು, ಮಾ.10: ಪೆಟ್ರೋಲ್, ಡೀಸೆಲ್, ಗ್ಯಾಸ್, ಅಡುಗೆ ಅನಿಲದ ಸಬ್ಸಿಡಿ ರದ್ಧತಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಸಿಪಿಐಎಂ ಪಕ್ಷದ ಕೇಂದ್ರ ಸಮಿತಿ ಕರೆಯಂತೆ ಬೈಂದೂರು ವಲಯ ಸಮಿತಿಯು ಗುಲ್ವಾಡಿಯ ಗ್ರಾಪಂ ಕಚೇರಿ ಬಳಿ ಮಂಗಳವಾರ ಪ್ರಚಾರಾಂದೋಲನ ಮತ್ತು ಬಹಿರಂಗ ಸಭೆ ನಡೆಸಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೋರೊನಾ ಸಂದರ್ಭದಲ್ಲಿ ಕಾಯಿಲೆ ತಡೆಗಟ್ಟಲು ದೇಶದ ಸಂಪತ್ತನ್ನು ಬಳಸಿಕೊಂಡು ಆದಾಯ ತೆರಿಗೆಯಿಂದ ಹೊರಗಿರುವ ಕುಟುಂಬಗಳಿಗೆ 6 ತಿಂಗಳು 7500ರೂ. ನಗದು, ಉಚಿತ ಆಹಾರ ಧಾನ್ಯ ಗಳನ್ನು ಒದಗಿಸಲು ಪಕ್ಷವು ಹಲವು ಹೋರಾಟಗಳ ಮೂಲಕ ಆಗ್ರಹಿಸಿತು. ಆದರೆ ಕೇಂದ್ರ ಸರಕಾರ ಮಾತ್ರ ಈ ಅವಧಿಯಲ್ಲಿ ಅದಾನಿ-ಅಂಬಾನಿ ಯಂತ ಕಂಪೆನಿಗಳಿಗೆ ದೇಶದ ಸಂಪತ್ತನ್ನು ಧಾರೆ ಎರೆಯಿತು. ಇದರ ಪರಿಣಾಮ ಕಳೆದ ಒಂದು ವರ್ಷದ ಅವಧಿಯಲ್ಲಿ 100 ಮಂದಿ ಬಂಡವಾಳಗಾರರ ಆದಾಯ 13ಲಕ್ಷ ಕೋಟಿ ಹೆಚ್ಚಳವಾಗಿದೆ ಎಂದು ಟೀಕಿಸಿದರು.

ಸಿಪಿಎಂ ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತ ಚುನಾವಣೆ ಬಾಂಡ್ ಎಂಬ ಕಾನೂನು ತಂದ ಬಿಜೆಪಿ, ಭ್ರಷ್ಟಾಚಾರವನ್ನು ಕಾನೂನು ಬದ್ಧಗೊಳಿಸಿಕೊಂಡು ತನ್ನ ಪಕ್ಷದ ಖಾತೆಯನ್ನು ಭದ್ರಗೊಳಿಸಿಕೊಂಡಿತು. ಈಗ ಕರೋನ ವನ್ನು ಬಳಸಿಕೊಂಡು ಬಡವರು, ಮಧ್ಯಮ ವರ್ಗಕ್ಕೆ ಬೆಲೆ ಏರಿಕೆ ಬರೆ ಎಳೆದು ಕೆಲವೇ ಕಾರ್ಪೋ ರೇಟ್ ಕಂಪೆನಿಗಳಿಗೆ ವಿಪರೀತ ಲಾಭ ಮಾಡಿಕೊಡುತ್ತಿದೆ. ದುಡಿಯುವ ಜನರ ಆದಾಯಗಳನ್ನೇ ಕಸಿದು ಶ್ರೀಮಂತರಿಗೆ ಲಾಭ ಮಾಡಿಕೊಡುವ ದಲ್ಲಾಳಿ ಕೆಲಸ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಅಧ್ಯಕ್ಷತೆಯನ್ನು ಜಿ.ಬಿ.ಮಹಮ್ಮದ್ ವಹಿಸಿದ್ದರು. ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್.ನರಸಿಂಹ ಮಾತನಾಡಿದರು. ಗುಲ್ವಾಡಿ ಪಕ್ಷದ ಮುಖಂಡ ಜಿ.ಡಿ.ಪಂಜು, ಗ್ರಾಪಂ ಸದಸ್ಯರಾದ ಯಾಸ್ಮೀನ್ ಜಮಾಲ್, ವನಜ, ಪಕ್ಷದ ಮುಖಂಡರಾದ ವೆಂಕಟೇಶ್ ಕೋಣಿ, ನಾಗರತ್ನ ನಾಡ, ವಲಯ ಸಮಿತಿ ಮುಖಂಡ ಸಂತೋಷ ಹೆಮ್ಮಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News