ಭಾರತದ ಬಳಿಕ ʼಟಿಕ್‌ ಟಾಕ್‌ ʼ ನಿಷೇಧಿಸಲಿರುವ ಪಾಕಿಸ್ತಾನ

Update: 2021-03-11 13:16 GMT

ಕರಾಚಿ: ನ್ಯಾಯಾಲಯದ ಆದೇಶದ ನಂತರ ಪಾಕಿಸ್ತಾನವು ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಟಿಕ್‌ ಟಾಕ್ ಅನ್ನು ನಿರ್ಬಂಧಿಸಲಿದೆ ಎಂದು ದೇಶದ ಟೆಲಿಕಾಂ ನಿಯಂತ್ರಕದ ವಕ್ತಾರರು ಗುರುವಾರ ತಿಳಿಸಿದ್ದಾರೆ.

"ಟಿಕ್ ಟಾಕ್ ನ ಪರವಾನಿಗೆಯನ್ನು ನಿರ್ಬಂಧಿಸಲು ನ್ಯಾಯಾಲಯವು ಪಿಟಿಎಗೆ ಆದೇಶ ನೀಡಿದೆ" ಎಂದು ಪಾಕಿಸ್ತಾನ ಟೆಲಿಕಾಂ ಪ್ರಾಧಿಕಾರದ (ಪಿಟಿಎ) ವಕ್ತಾರ ಖುರ್ರಾಮ್ ಮೆಹ್ರಾನ್ ರಾಯಿಟರ್ಸ್ಗೆ ತಿಳಿಸಿದ್ದಾರೆ.

ಟಿಕ್‌ ಟಾಪ್‌ ಆ್ಯಪ್ ಸಮಾಜದಲ್ಲಿ ಅಸಭ್ಯ ವಿಷಯವನ್ನು ಹರಡುತ್ತಿದೆ ಎಂದು ಖಾಸಗಿ ದೂರುದಾರರೊಬ್ಬರು ಪ್ರಕರಣ ದಾಖಲಿಸಿದ ನಂತರ, ಈ ಕುರಿತಾದಂತೆ ನಿಷೇಧಕ್ಕೆ ಆದೇಶ ನೀಡುವುದಾಗಿ ವಾಯುವ್ಯ ನಗರವಾದ ಪೇಶಾವರದ ಹೈಕೋರ್ಟ್ ಹೇಳಿದೆ ಎಂದು ಪಾಕಿಸ್ತಾನದ ಪಿಟಿಎ ಪ್ರತಿನಿಧಿ ವಕೀಲ ಜೆಹಂಝೆಬ್ ಮೆಹ್ಸೂದ್ ಹೇಳಿದ್ದಾರೆ. ನ್ಯಾಯಾಲಯದ ಆದೇಶದ ಕುರಿತು ಕಂಪನಿಯು ಸರಿಯಾದ ಸಮಯದಲ್ಲಿ ಹೆಚ್ಚಿನ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂದು ಟಿಕ್‌ ಟಾಕ್‌ ಪ್ರತಿನಿಧಿಯು ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನವು ಈ ಹಿಂದೆ ಅಕ್ಟೋಬರ್‌ನಲ್ಲಿ ಟಿಕ್‌ ಟಾಕ್ ಅಪ್ಲಿಕೇಶನ್ ಅನ್ನು ನಿಷೇಧಿಸಿತ್ತು, ಆದರೆ ಕಂಪನಿಯು “ಅಶ್ಲೀಲತೆ ಮತ್ತು ಅನೈತಿಕತೆಯನ್ನು ಹರಡುವಲ್ಲಿ ತೊಡಗಿರುವ ಎಲ್ಲಾ ಖಾತೆಗಳನ್ನು ನಿರ್ಬಂಧಿಸುವುದಾಗಿ ಹೇಳಿಕೆ ನೀಡಿದ 10 ದಿನಗಳೊಳಗೆ ಅದನ್ನು ಮರುಸ್ಥಾಪಿಸಿತು ಎನ್ನಲಾಗಿದೆ.

ವಾಟ್ಸಾಪ್ ಮತ್ತು ಫೇಸ್‌ ಬುಕ್‌ ಅಪ್ಲಿಕೇಶನ್‌ ಗಳ ಬಳಿಕ ಪಾಕಿಸ್ತಾನದಲ್ಲಿ ಹೆಚ್ಚು ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ನಲ್ಲಿ ಟಿಕ್‌ ಟಾಕ್‌ ಕೂಡ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News