ಗೋವು ಭಾರತೀಯ ಆರ್ಥಿಕತೆಯ ಅಡಿಪಾಯವಾಗಿದೆ:ಗುಜರಾತ್ ರಾಜ್ಯಪಾಲ ದೇವವೃತ್
ಅಹಮದಾಬಾದ್: ನಮ್ಮ ಪೋಷಣೆಗೆ ಹಾಲು ಹಾಗೂ ಕೃಷಿಯಲ್ಲಿ ಸಗಣಿ ಹಾಗೂ ಮೂತ್ರವನ್ನು ನೀಡುವ ಗೋವು ಭಾರತೀಯ ಆರ್ಥಿಕತೆಯ ಅಡಿಪಾಯವಾಗಿದೆ. ನೈಸರ್ಗಿಕ ಕೃಷಿ ಸಂಪೂರ್ಣವಾಗಿ ಸ್ಥಳೀಯ ತಳಿಗಳ ಮೇಲೆ ಅವಲಂಬಿತವಾಗಿದೆ ಎಂದು ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅಭಿಪ್ರಾಯಪಟ್ಟಿದ್ದಾರೆ.
ಗಾಂಧಿನಗರದ ಕಾಮಧೇನು ವಿಶ್ವವಿದ್ಯಾಲಯದ ಏಳನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ರಾಜ್ಯಪಾಲ ದೇವವ್ರತ್, ಹಸುವಿನ ಸಗಣಿ ರೈತರಿಗೆ ಆದಾಯ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಹಿಸಾರ್ ನ ಕೃಷಿ ವಿವಿ ವಿಜ್ಞಾನಿಗಳು ನಡೆಸಿದ ಸಂಶೋಧನೆಯನ್ನು ಉಲ್ಲೇಖಿಸಿದ ದೇವವ್ರತ್, ಒಂದು ಗ್ರಾಮ್ ಸಗಣಿಯಲ್ಲಿ 300 ಕೋಟಿಗೂ ಅಧಿಕ ಬ್ಯಾಕ್ಟಿರಿಯಾ ಇದ್ದು, ಇದು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದ ರೈತರ ಆದಾಯ ಹೆಚ್ಚಬಹುದು. ಗುಜರಾತ್ ನ ಅಮುಲ್ ನೊಂದಿಗೆ 30 ಲಕ್ಷಕ್ಕೂ ಅಧಿಕ ರೈತರು ಸಂಬಂಧ ಹೊಂದಿದ್ದು ಅವರೆಲ್ಲರೂ ಸ್ಥಿತಿವಂತರಾಗಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದು ಆಚಾರ್ಯ ದೇವವ್ರತ್ ಹೇಳಿದರು.