ಸ್ಟಾನ್ ಸ್ವಾಮಿಯವರ ಜಾಮೀನು ಆದೇಶವನ್ನು ಮುಂದೂಡಿದ ನ್ಯಾಯಾಲಯ
Update: 2021-03-11 23:03 IST
ಹೊಸದಿಲ್ಲಿ: ತಾನು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಬಯಸುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ)ತಿಳಿಸಿದ ಹಿನ್ನೆಲೆಯಲ್ಲಿ ಎಲ್ಗರ್ ಪರಿಷತ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು ಪಾದ್ರಿ ಹಾಗೂ ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿಯವರ ಜಾಮೀನು ಆದೇಶವನ್ನು ಮಾರ್ಚ್ 15ರ ತನಕ ಮುಂದೂಡಿದೆ.
ಎನ್ ಐಎ ಅರ್ಜಿಗೆ ತಮ್ಮ ಪ್ರತಿಕ್ರಿಯೆ ನೀಡಬೇಕೆಂದು ನ್ಯಾಯಾಲಯವು ಸ್ವಾಮಿಯ ವಕೀಲರಿಗೆ ನಿರ್ದೇಶಿಸಿದೆ. ಇದೀಗ ಸೋಮವಾರದಂದು ವಿಚಾರಣೆ ಮುಂದುವರಿಸಲಿದೆ.
83ರ ವಯಸ್ಸಿನ ಸ್ಟಾನ್ ಸ್ವಾಮಿ ಕಳೆದ ವರ್ಷದ ನವೆಂಬರ್ ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಎನ್ ಐಎ ಆಕ್ಷೇಪ ವ್ಯಕ್ತಪಡಿಸಿದೆ.
ಆರು ತಿಂಗಳ ಕಾಲ ಕೋರ್ಟಿಗೆ ಹಾಜರಾಗುವುದರಿಂದ ವಿನಾಯಿತಿ ಕೋರಿ ಲೇಖಕ-ಕವಿ ವರವರ ರಾವ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ಗುರುವಾರ ಸ್ವೀಕರಿಸಿದೆ. ರಾವ್ ಗೆ ಕಳೆದ ತಿಂಗಳು ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.