×
Ad

ಬ್ರಹ್ಮಪುತ್ರ ನದಿಗೆ ಟಿಬೆಟ್‌ನಲ್ಲಿ ಅಣೆಕಟ್ಟು: ಚೀನಾ ಸಂಸತ್ತು ಅನುಮೋದನೆ

Update: 2021-03-11 23:10 IST

ಬೀಜಿಂಗ್, ಮಾ.11: ಬ್ರಹ್ಮಪುತ್ರ ನದಿಗೆ ಟಿಬೆಟ್‌ನಲ್ಲಿ ಜಲವಿದ್ಯುತ್ ಯೋಜನೆ ಅಣೆಕಟ್ಟು ನಿರ್ಮಿಸುವ ವಿವಾದಾತ್ಮಕ ಯೋಜನೆ ಸಹಿತ ಹಲವು ಬಿಲಿಯನ್ ಡಾಲರ್ ಮೊತ್ತದ ಯೋಜನೆಗಳ ನೀಲನಕಾಶೆ ಹೊಂದಿರುವ 14ನೇ ಪಂಚವಾರ್ಷಿಕ ಯೋಜನೆಗೆ ಚೀನಾ ಸಂಸತ್ತು ಗುರುವಾರ ಅನುಮೋದನೆ ನೀಡಿದೆ ಎಂದು ಚೀನಾದ ಸರಕಾರಿ ಮಾಧ್ಯಮ ವರದಿ ಮಾಡಿದೆ.

ಭಾರತದ ಅರುಣಾಚಲ ಪ್ರದೇಶ ಗಡಿಭಾಗಕ್ಕೆ ಸಮೀಪದಲ್ಲಿ ಅಣೆಕಟ್ಟು ನಿರ್ಮಿಸುವ ಯೋಜನೆಗೆ ಭಾರತ ಆತಂಕ ವ್ಯಕ್ತಪಡಿಸಿದೆ. ಗುರುವಾರ ಮುಕ್ತಾಯಗೊಂಡ ಚೀನಾದ ಸಂಸತ್ತು ‘ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್(ಎನ್‌ಪಿಸಿ)’ನ ಅಧಿವೇಶನದಲ್ಲಿ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಮತ್ತು ದೀರ್ಘಾವಧಿಯ ಉದ್ದೇಶದ 14ನೇ ಪಂಚವಾರ್ಷಿಕ ಯೋಜನೆ(2021-2025)ಗೆ ಅನುಮೋದನೆ ದೊರಕಿದೆ. ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್, ಪ್ರಧಾನಿ ಲಿ ಕೆಕಿಯಾನ್ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದ ಅಧಿವೇಶನದಲ್ಲಿ ಚೀನಾದ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶದ 60 ಯೋಜನೆಗಳಿಗೆ ಅನುಮೋದನೆ ದೊರಕಿದೆ. ಈ ಯೋಜನೆಗಳ ನೀಲನಕ್ಷೆಗೆ ಕಳೆದ ವರ್ಷ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಅಂಗೀಕಾರ ನೀಡಿದೆ. ಅಣೆಕಟ್ಟಿನ ನಿರ್ಮಾಣ ಕಾರ್ಯ ಈ ವರ್ಷ ಆರಂಭಿಸಲು ಅಧಿಕಾರಿಗಳು ಶ್ರಮಿಸಬೇಕು.

ಪರಿಸರದ ಮೇಲಾಗುವ ಪರಿಣಾಮದ ಮೌಲ್ಯಮಾಪನವನ್ನು ತಕ್ಷಣ ನಡೆಸಿ ಯೋಜನೆಗೆ ಸಂಬಂಧಿಸಿದ ಸಮಗ್ರ ಪೂರ್ವಸಿದ್ಧತೆಗೆ ಅನುಮೋದನೆ ಪಡೆಯಬೇಕು ಎಂದು ಟಿಬೆಟ್ ಸ್ವಾಯತ್ತ ಪ್ರದೇಶದ ಕಮ್ಯುನಿಸ್ಟ್ ಪಕ್ಷದ ಉಪಾಧ್ಯಕ್ಷರು ಸಂಸತ್ ಅಧಿವೇಶನಕ್ಕೂ ಮುನ್ನ ಹೇಳಿರುವುದಾಗಿ ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಬ್ರಹ್ಮಪುತ್ರ ನದಿಯ ಕೆಳಹರಿವಿನ ಭಾಗದಲ್ಲಿ ಅಣೆಕಟ್ಟು ನಿರ್ಮಿಸುವ ಯೋಜನೆಗೆ ಭಾರತ ಮತ್ತು ಬಾಂಗ್ಲಾದೇಶ ಎತ್ತಿರುವ ಆಕ್ಷೇಪಕ್ಕೆ ಪ್ರತ್ರಿಕ್ರಿಯಿಸಿರುವ ಚೀನಾ, ಈ ಎರಡೂ ದೇಶಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ ಎಂದು ಹೇಳಿತ್ತು. ಗಡಿರೇಖೆ ದಾಟಿ ಸಾಗುವ ನದಿಗಳ ನೀರನ್ನು ಬಳಸುವ ಹಕ್ಕು ಕೆಳಭಾಗದ ನದಿ ತೀರದ ದೇಶಗಳಿಗೆ ಇರುವುದರಿಂದ ನದಿಯ ಪಾತ್ರದ ಮೇಲ್ಭಾಗದಲ್ಲಿ ನಡೆಸಲಾಗುವ ಯಾವುದೇ ಚಟುವಟಿಕೆ ಈ ದೇಶಗಳ ಹಿತಾಸಕ್ತಿಗೆ ತೊಡಕಾಗಬಾರದು ಎಂದು ಭಾರತ ಈಗಾಗಲೇ ಆಕ್ಷೇಪ ಎತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News