×
Ad

ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ಕರೆಯ ಮೂಲ ತಿಹಾರ್ ಬಳಿ ಪತ್ತೆ

Update: 2021-03-11 23:32 IST

ಮುಂಬೈ, ಮಾ.11: ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾದ ಪ್ರಕರಣದ ಹೊಣೆ ಹೊರುವುದಾಗಿ ಜೈಷುಲ್ ಹಿಂದ್ ಸಂಘಟನೆ ಹೇಳಿಕೆ ನೀಡಿದ್ದ ಟೆಲಿಗ್ರಾಂ ಚಾನೆಲ್‌ನ ಮೂಲ ದಿಲ್ಲಿಯ ತಿಹಾರ್‌ನಲ್ಲಿದೆ ಎಂದು ಮುಂಬೈಯ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಜೈಷುಲ್ ಸಂಘಟನೆಯ ಫೋನ್ ಕರೆಯ ನಂಬರ್‌ನ ಆಧಾರದಲ್ಲಿ, ಖಾಸಗಿ ಸೈಬರ್ ಏಜೆನ್ಸಿಯ ನೆರವಿನಿಂದ ಫೋನ್ ನಂಬರ್ ಅನ್ನು ಪತ್ತೆಹಚ್ಚಲಾಗಿದೆ. ತನಿಖೆಯ ಸಂದರ್ಭ ಫೋನ್‌ನ ಲೊಕೇಶನ್ ದಿಲ್ಲಿಯ ತಿಹಾರ್ ಜೈಲಿನ ಸಮೀಪವಿರುವುದು ಪತ್ತೆಯಾಗಿದೆ. ಈ ಬಗ್ಗೆ ದಿಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಟೆಲಿಗ್ರಾಂ ಚಾನೆಲ್ ಅನ್ನು ಫೆಬ್ರವರಿ 26ರಂದು ಸೃಷ್ಟಿ ಮಾಡಿ, ಫೆಬ್ರವರಿ 27ರ ತಡರಾತ್ರಿ ಟೆಲಿಗ್ರಾಂ ಮೆಸೇಜಿಂಗ್ ಆ್ಯಪ್‌ನಲ್ಲಿ, ಪ್ರಕರಣದ ಹೊಣೆ ಹೊತ್ತ ಹೇಳಿಕೆಯನ್ನು ಪೋಸ್ಟ್ ಮಾಡಲಾಗಿದೆ. ಕ್ರಿಪ್ಟೊಕರೆನ್ಸಿ ಮೂಲಕ ನಿರ್ದಿಷ್ಟ ಮೊತ್ತದ ಹಣವನ್ನು ನೀಡುವಂತೆ ಸೂಚಿಸಿ ಹಣ ಪಾವತಿಸಲು ಲಿಂಕ್ ಒಂದನ್ನು ಉಲ್ಲೇಖಿಸಲಾಗಿತ್ತು. ಆದರೆ ಈ ಲಿಂಕ್ ಒತ್ತಿದಾಗ ‘ಇದು ಲಭ್ಯವಾಗುವುದಿಲ್ಲ’ ಎಂಬ ಸಂದೇಶ ಬರುತ್ತಿದೆ. ಇದೊಂದು ಕಿಡಿಗೇಡಿ ಕೃತ್ಯವಾಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಫೆಬ್ರವರಿ 28ರಂದು ಸಾಮಾಜಿಕ ಮಾಧ್ಯಮದಲ್ಲಿ ಜೈಷುಲ್ ಸಂಘಟನೆಯ ಹೇಳಿಕೆ ಪ್ರಕಟವಾಗಿದ್ದು, ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News