ನಂದಿಗ್ರಾಮ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸುವೇಂದು ಅಧಿಕಾರಿ
ಪುರ್ಬ ಮಿಡ್ನಾಪುರ(ಪ.ಬಂಗಾಳ): ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಹಾಗೂ ಸ್ಮತಿ ಇರಾನಿ ಅವರೊಂದಿಗೆ ಕಿ.ಮೀ. ದೂರ ರೋಡ್ ಶೋ ನಡೆಸಿದ ಅಧಿಕಾರಿ ಹಲ್ಡಿಯಾದ ಉಪ ವಿಭಾಗೀಯ ಕಚೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಿದರು.
2016ರ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಧಿಕಾರಿ ಪ್ರತಿಸ್ಪರ್ಧಿ ಸಿಪಿಐ ಅಭ್ಯರ್ಥಿಯನ್ನು 81,230 ಮತಗಳಿಂದ ಸೋಲಿಸಿದ್ದರು.
ಮಾರ್ಚ್ 6ರಂದು ಮಾಜಿ ಟಿಎಂಸಿ ನಾಯಕ ಸುವೇಂದು ಅಧಿಕಾರಿಯವರನ್ನು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸುವ ಮೂಲಕ ನಂದಿಗ್ರಾಮ ವಿಧಾನಸಭಾ ಕ್ಷೇತ್ರ ಇಡೀ ದೇಶದ ಗಮನ ಸೆಳೆಯುವಂತೆ ಮಾಡಿದೆ.
ಮಮತಾ ಸರಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಅಧಿಕಾರಿ ಕಳೆದ ವರ್ಷದ ಡಿಸೆಂಬರ್ ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಅಧಿಕಾರಿ ಇಂದು ನಾಮಪತ್ರ ಸಲ್ಲಿಕೆಗೆ ಮೊದಲು ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ನಿನ್ನೆ ಟ್ವೀಟ್ ಮಾಡಿದ್ದ ಅಧಿಕಾರಿ, “ನಂದಿಗ್ರಾಮ ಅಸೆಂಬ್ಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ನಾಳೆ(ಮಾ.12)ನಾನು ಹಲ್ದಿಯಾದ ಎಸ್ ಡಿಒ ಕಚೇರಿಯಲ್ಲಿರುತ್ತೇನೆ. ಇತಿಹಾಸ ನಿರ್ಮಿಸಲು ಮೊದಲ ಹೆಜ್ಜೆ ಇಡುತ್ತಿರುವ ಕ್ಷಣಕ್ಕೆ ಸಾಕ್ಷಿಯಾಗಲು 10:30ರ ಬಳಿಕ ಎಲ್ಲರೂ ನನ್ನೊಂದಿಗೆ ಕೈಜೋಡಿಸಿ ಎಂದು ಟ್ವೀಟಿಸಿದ್ದರು.