ತೀರ್ಪಿನಲ್ಲಿ ಕೆಟ್ಟ ಪದಗಳನ್ನು ಬಳಸಿದ ನ್ಯಾಯಾಧೀಶರನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್
ಮುಂಬೈ: ಅತ್ಯಾಚಾರ ಕುರಿತ ದೂರಿಗೆ ಸಂಬಂಧಿಸಿದಂತೆ ಸಾಕ್ಷ್ಯ ದಾಖಲೀಕರಣ ವೇಳೆ ಹಾಗೂ ನಂತರ ಬರೆದ ತೀರ್ಪಿನಲ್ಲಿ ಕೆಟ್ಟ ಭಾಷೆ ಹಾಗೂ ಆಡು ಭಾಷೆಯ ಪದಗಳನ್ನು ಬಳಸಿದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರೊಬ್ಬರನ್ನು ಬಾಂಬೆ ಹೈಕೋರ್ಟಿನ ಔರಂಗಾಬಾದ್ ಪೀಠ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಧೀಶರು ಬಳಸಿದ ಪದಗಳು ಮಹಿಳೆಯರಿಗೆ 'ಅತೀವ ಅಗೌರವ' ಉಂಟು ಮಾಡುತ್ತದೆ ಎಂದು ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಹಾಗೂ ಬಿ ಯು ದೇಬದ್ವರ್ ಅವರ ಪೀಠ ಮಾರ್ಚ್ 1ರಂದು ಪ್ರಕರಣವೊಂದರ ತೀರ್ಪು ನೀಡುವ ವೇಳೆ ಹೇಳಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ 52 ವರ್ಷದ ವ್ಯಕ್ತಿಯೊಬ್ಬನನ್ನು ಖುಲಾಸೆಗೊಳಿಸಿ ಸೆಶನ್ಸ್ ನ್ಯಾಯಾಲಯ ಆಗಸ್ಟ್ 2012ರಲ್ಲಿ ನೀಡಿದ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಹೈಕೋರ್ಟ್‍ಗೆ ಸಲ್ಲಿಸಿದ ಅಪೀಲಿನ ವಿಚಾರಣೆಯನ್ನು ನಡೆಸಿದ ಸಂದರ್ಭ ನ್ಯಾಯಾಧೀಶರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.
ಸಂಬಂಧಿಯೂ ಆಗಿದ್ದ ಆರೋಪಿ ಸಂತ್ರಸ್ತೆಯನ್ನು ಆಕೆಯ ಮನೆಯಲ್ಲಿ ಮಾರ್ಚ್ 2010ರಲ್ಲಿ ಅತ್ಯಾಚಾರಗೈದಿದ್ದ ಎಂದು ಪ್ರಾಸಿಕ್ಯೂಶನ್ ಈ ಪ್ರಕರಣದಲ್ಲಿ ವಾದಿಸಿತ್ತು. "ಸಂತ್ರಸ್ತೆ ಮರಾಠಿ ಭಾಷೆಯಲ್ಲಿ ನೀಡಿದ್ದ ತನ್ನ ಸಾಕ್ಷ್ಯದಲ್ಲಿ ಯಾವುದೇ ಆಕ್ಷೇಪಾರ್ಹ ಪದಗಳನ್ನು ಬಳಸಿಲ್ಲದೇ ಇದ್ದರೂ ಈ ಹೇಳಿಕೆಯನ್ನು ಇಂಗ್ಲಿಷ್‍ನಲ್ಲಿ ಬರೆಯುವಾಗ ನ್ಯಾಯಾಧೀಶರು ಸತತವಾಗಿ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. ಈ ಪದಗಳನ್ನು ಆಡು ಭಾಷೆಯಲ್ಲಿ ಬಳಸಲಾಗುತ್ತದೆ ಹಾಗೂ ಕೆಟ್ಟ ಪದಗಳು, ಮಹಿಳೆಯರಿಗೆ ಅಗೌರವ ಸೂಚಿಸುತ್ತವೆ,'' ಎಂದು ಔರಂಗಾಬಾದ್ ಪೀಠ ಹೇಳಿದೆ.
ಆರೋಪಿಯ ಖುಲಾಸೆ ವಿರುದ್ಧದ ಅಪೀಲನ್ನೂ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್, ಪ್ರಾಸಿಕ್ಯೂಶನ್ ಆರೋಪ ಸಾಬೀತು ಪಡಿಸಲು ಯಾವುದೇ ಸಾಕ್ಷ್ಯ ಸಲ್ಲಿಸಿಲ್ಲ ಎಂದು ಹೇಳಿದೆ.