ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಡಿಎಂಕೆ, ಮೊದಲ ಬಾರಿ ಸ್ಟಾಲಿನ್ ಪುತ್ರ ಉದಯನಿಧಿ ಸ್ಪರ್ಧೆ
ಚೆನ್ನೈ: ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಮುಂಬರುವ ವಿಧಾನಸಭಾ ಚುನಾವಣೆಗೆ 173 ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದರು. ಹೆಚ್ಚಿನ ಹಾಲಿ ಶಾಸಕರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದ್ದು, ಯುವ ಹಾಗೂ ಹಿರಿಯ ನಾಯಕರಿಗೆ ಅವಕಾಶ ಕಲ್ಪಿಸಲಾಗಿದೆ.
ಡಿಎಂಕೆಯ ಉದಯಿಸುತ್ತಿರುವ ಸೂರ್ಯ ಚಿಹ್ನೆಯಡಿ ಸುಮಾರು 187 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಮೊದಲ ಬಾರಿ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದಾರೆ. ಡಿಎಂಕೆ ಯುವ ವಿಭಾಗದ ಕಾರ್ಯದರ್ಶಿ ಉದಯನಿಧಿ ಚಿಪಾಕ್-ತ್ರಿಪ್ಲಿಕೇನ್ ವಿಧಾನಸಭಾ ಕ್ಷೇತ್ರದಿಂದ ಸ್ದರ್ಧಿಸಲಿದ್ದಾರೆ. ಈ ಸೀಟನ್ನು ಉದಯನಿಧಿ ತಾತ ಹಾಗೂ ದಿವಂಗತ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಪ್ರತಿನಿಧಿಸುತ್ತಿದ್ದರು. ಸ್ಟಾಲಿನ್ ಅವರು ಕೊಲಥೂರ್ ಕ್ಷೇತ್ರದಿಂದ ಮೂರನೇ ಬಾರಿ ಕಣಕ್ಕಿಳಿಯಲಿದ್ದಾರೆ. ಸದ್ಯ ಅವರು ಕೊಲಥೂರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮೊದಲು ಸ್ಟಾಲಿನ್ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿಯವರ ಚೆನ್ನೈನ ಮರಿನಾ ಬೀಚ್ ನಲ್ಲಿರುವ ಸ್ಮಾರಕಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಡಿಎಂಕೆ ಪ್ರಧಾನ ಕಾರ್ಯದರ್ಶಿ ಎಸ್.ದೊರೈ ಮುರುಗನ್,ಕೆಎನ್ ನೆಹರೂ, ಎಂಆರ್‍ಕೆ ಪನ್ನೀರ್‍ಸೆಲ್ವಂ, ಪೊನ್‍ಮುಡಿ, ಸುಬ್ಬಲಕ್ಷ್ಮೀ ಜಗದೀಶನ್, ಆಲಾಡಿ ಅರುಣಾ ಅವರು ಕಣದಲ್ಲಿರುವ ಹಿರಿಯ ನಾಯಕರಾಗಿದ್ದಾರೆ.
ಯುವ ನಾಯಕರಾದ ಉದಯನಿಧಿ, ಮಹೇಶ್, ಟಿ.ರಾಜಾ, ತಿಲಗರಂಜನ್ ಅವರು ಸ್ಪರ್ದಿಸುತ್ತಿದ್ದಾರೆ.