ಮಹಾರಾಷ್ಟ್ರದಲ್ಲಿ ಕೊರೋನ ಆರ್ಭಟ: ಪುಣೆಯಲ್ಲಿ ನೈಟ್ ಕರ್ಫ್ಯೂ, ಅಕೋಲದಲ್ಲಿ ಲಾಕ್‍ಡೌನ್
Update: 2021-03-12 16:19 IST
ಮುಂಬೈ: ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಕೊರೋನ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪುಣೆಯಲ್ಲಿ ನೈಟ್ ಕರ್ಫ್ಯೂ ಹೇರಲಾಗಿದೆ. ಪುಣೆಯಲ್ಲಿ ಮತ್ತೊಮ್ಮೆ ರಾತ್ರಿ 11ರಿಂದ ಬೆಳಗ್ಗೆ 6ರ ತನಕ ಕಫ್ರ್ಯೂ ಜಾರಿಗೆ ತರಲಾಗಿದೆ.
ಕೊರೋನ ವೈರಸ್ ಮತ್ತೆ ಕಾಣಿಸಿಕೊಂಡ ಕಾರಣ ಶಾಲಾ-ಕಾಲೇಜುಗಳನ್ನು ಮಾರ್ಚ್ 31ರ ತನಕ ಮುಚ್ಚಲಾಗಿದೆ. ಹೊಟೇಲ್ ಹಾಗೂ ಬಾರ್ ಗಳನ್ನು ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಮುಚ್ಚಲಾಗಿದೆ.
ಪುಣೆಯಲ್ಲಿರುವ ಮಾಲ್ ಗಳು ಹಾಗೂ ಚಿತ್ರಮಂದಿರಗಳು ನೈಟ್ ಕರ್ಫ್ಯೂ ವೇಳೆ ರಾತ್ರಿ 10ರಿಂದ 6ರ ತನಕ ಬಂದ್ ಆಗಿರಲಿದೆ. ಗಾರ್ಡನ್ ಗಳು ಸಂಜೆ ಮುಚ್ಚಿರುತ್ತವೆ.
ಅಕೋಲ ಜಿಲ್ಲೆಯಲ್ಲಿ ಆಡಳಿತಾಧಿಕಾರಿಗಳು ಶುಕ್ರವಾರ ಸಂಜೆಯಿಂದ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದಾರೆ. ಅಕೋಲದಲ್ಲಿ ಶುಕ್ರವಾರ ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 8ರ ತನಕ ಲಾಕ್ ಡೌನ್ ಇರಲಿದೆ.
ಕೊರೋನ ಪ್ರಕರಣ ಹೆಚ್ಚಳವಾದ ಕಾರಣ ಗುರುವಾರ ನಾಗ್ಪುರದಲ್ಲಿ ಒಂದು ವಾರ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಿಸಲಾಗಿತ್ತು.