ಮಹಿಳೆಗೆ ಹಲ್ಲೆ ಆರೋಪ: ಸತ್ಯ ಹೊರಬರುವವರೆಗೆ ಇಬ್ಬರಿಗೂ ನಮ್ಮ ಬೆಂಬಲ ಎಂದ ಝೊಮ್ಯಾಟೋ
ಹೊಸದಿಲ್ಲಿ: ಬೆಂಗಳೂರಿನ ಮಹಿಳೆಯ ಮೇಲೆ ಝೊಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾದ ಘಟನೆಗೆ ಪ್ರತಿಕ್ರಿಯೆ ನೀಡಿರುವ ಝೊಮ್ಯಾಟೋದ ಸಿಇಒ ದೀಪಿಂದರ್ ಗೋಯಲ್, ಡೆಲಿವರಿ ಬಾಯ್ ಸೇವೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಪೊಲೀಸ್ ತನಿಖೆ ಅವಧಿಯಲ್ಲಿ ಆತನ ಗಳಿಕೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಝೊಮ್ಯಾಟೊ ಡೆಲಿವರಿ ಬಾಯ್ ತನ್ನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ ಎಂದು ಬೆಂಗಳೂರಿನ ಮಹಿಳೆ ಹಿತೇಶಾ ಚಂದ್ರಾನಿ ಆರೋಪಿಸಿದ ಬಳಿಕ ಈ ಕುರಿತು ಮಾತನಾಡಿದ ಆಹಾರ ವಿತರಣಾ ಆ್ಯಪ್ ನ ಸಹ ಸಂಸ್ಥಾಪಕ ಗೋಯಲ್, ಸತ್ಯ ಹೊರಬರುವವರೆಗೆ ಕಂಪೆನಿಯು ಸಾಧ್ಯವಾದಷ್ಟು ಮಟ್ಟಿಗೆ ಸಂತ್ರಸ್ತ ಮಹಿಳೆ ಹಾಗೂ ಡೆಲಿವರಿ ಬಾಯ್ ಇಬ್ಬರಿಗೂ ಬೆಂಬಲ ನೀಡುತ್ತದೆ. ನಾವು ಹಿತೇಶಾ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಆಕೆಯ ವೈದ್ಯಕೀಯ ವೆಚ್ಚವನ್ನು ನಾವೇ ಭರಿಸಿದ್ದೇವೆ. ನಾವು ಡೆಲಿವರಿ ಬಾಯ್ ಕಾಮರಾಜ್ ಅವರೊಂದಿಗೂ ಸಂಪರ್ಕದಲ್ಲಿದ್ದೇವೆ ಎಂದರು.
ಕಾಮರಾಜ್ ಸೇವೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಪೊಲೀಸ್ ತನಿಖೆ ನಡೆಯತ್ತಿರುವಾಗ ಆತನ ಗಳಿಕೆಯನ್ನು ಕಂಪೆನಿ ಭರಿಸಲಿದೆ. ಕಾಮರಾಜ್ ಈ ತನಕ 5,000 ಡೆಲಿವರಿಗಳನ್ನು ಮಾಡಿದ್ದು, ಸ್ಟಾರ್ ರೇಟಿಂಗ್ ನಲ್ಲಿ 5ರಲ್ಲಿ 4.7 ಅಂಕ ಪಡೆದಿದ್ದಾನೆ. ಆತ ನಮ್ಮೊಂದಿಗೆ 26 ತಿಂಗಳುಗಳಿಂದ ಕೆಲಸ ಮಾಡುತ್ತಿದ್ದಾನೆ ಎಂದು ಗೋಯಲ್ ತಿಳಿಸಿದರು.
ಝೊಮ್ಯಾಟೋ ಡೆಲಿವರಿ ಬಾಯ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಹಿತೇಶಾ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವನ್ನು ಹರಿದುಬಿಟ್ಟ ಬಳಿಕ ಪೊಲೀಸರು ಬುಧವಾರ ಕಾಮರಾಜ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.