×
Ad

2020ರಲ್ಲಿ ಜಗತ್ತಿನಾದ್ಯಂತ 65 ಪತ್ರಕರ್ತರ ಹತ್ಯೆ

Update: 2021-03-12 21:05 IST

ಬ್ರುಸೆಲ್ಸ್,ಮಾ.12: ಜಗತ್ತಿನಾದ್ಯಂತ 2020ರಲ್ಲಿ ಒಟ್ಟು 65 ಮಂದಿ ಪತ್ರಕರ್ತರು ಅಥವಾ ಮಾಧ್ಯಮ ಉದ್ಯೋಗಿಗಳು, ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಹತ್ಯೆಯಾಗಿದ್ದಾರೆಂದು ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಐಎಫ್‌ಜೆ) ವರದಿ ತಿಳಿಸಿದೆ.

 2020ರಲ್ಲಿ ಹತ್ಯೆಗೀಡಾದ ಪತ್ರಕರ್ತರು ಅಥವಾ ಮಾಧ್ಯಮ ಉದ್ಯೋಗಿಗಳ ಸಂಖ್ಯೆಯು 2019ಕ್ಕಿಂತ 17ರಷ್ಟು ಅಧಿಕವಾಗಿದೆ ಎಂದು ಐಎಫ್‌ಜೆ ಶುಕ್ರವಾರ ಪ್ರಕಟಿಸಿದ ಪತ್ರಕರ್ತರ ಹತ್ಯೆ ಪ್ರಕರಣಗಳ ಕುರಿತಾದ ವಾರ್ಷಿಕ ವರದಿಯೊಂದರಲ್ಲಿ ತಿಳಿಸಿದೆ.

 16 ದೇಶಗಳಲ್ಲಿ ಪತ್ರಕರ್ತರ ಮೇಲೆ ಯೋಜಿತ ದಾಳಿಗಳು, ಬಾಂಬ್ ಸ್ಪೋಟ ಹಾಗೂ ಗುಂಡಿನ ಚಕಮಕಿಯ ಪ್ರಕರಣಗಳು ವರದಿಯಾಗಿವೆಯೆಂದು ಐಎಫ್‌ಜೆ ತಿಳಿಸಿದೆ.

1990ರಿಂದ ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟವು ಪತ್ರಕರ್ತರ ಹತ್ಯೆ ಪ್ರಕರಣಗಳ ಅಂಕಿಅಂಶಗಳನ್ನು ಸಂಗ್ರಹಿಸಲು ಅರಂಭಿಸಿದ್ದು, ಅಂದಿನಿಂದ ಈವರೆಗೆ ಒಟ್ಟು 2680 ಪತ್ರಕರ್ತರು ಕೊಲೆಗೀಡಾಗಿರುವುದು ದಾಖಲಾಗಿದೆ.

 ಮೆಕ್ಸಿಕೊದ ಭೂಗತ ಪಾತಕಿಗಳಿಂದ, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಸೊಮಾಲಿಯಾದ ಉಗ್ರರು ಹಾಗೂ ಭಾರತ ಮತ್ತು ಫಿಲ್ಫ್ಫೀನ್ಸ್‌ನಲ್ಲಿ ಅಸಹಿಷ್ಣುತಾ ತೀವ್ರವಾದಿಗಳು ಪತ್ರಕರ್ತರ ರಕ್ತಪಾತವನ್ನು ಮುಂದುವರಿಸಿದ್ದಾರೆ ಎಂದು ಐಎಫ್‌ಜೆ ಪ್ರಧಾನ ಕಾರ್ಯದರ್ಶಿ ಆ್ಯಂಥೊನಿ ಬೆಲ್ಲಾಂಜೆರ್ ತಿಳಿಸಿದ್ದಾರೆ.

 ಗರಿಷ್ಠ ಸಂಖ್ಯೆಯ ಪತ್ರಕರ್ತರ ಹತ್ಯೆ ನಡೆದ ರಾಷ್ಟ್ರಗಳ ಪಟ್ಟಿಯಲ್ಲಿ ಮೆಕ್ಸಿಕೊ ಅಗ್ರಸ್ಥಾನದಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಅಲ್ಲಿ ನಾಲ್ಕು ಬಾರಿ ಮೆಕ್ಸಿಕೊದಲ್ಲಿ ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಪತ್ರಕರ್ತರ ಹತ್ಯೆ ಪ್ರಕರಣಗಳು ವರದಿಯಾಗಿವೆ. 10 ಪತ್ರಕರ್ತರು ಹತ್ಯೆಯಾಗಿರುವ ಅಫ್ಘಾನಿಸ್ತಾನ ದ್ವಿತೀಯ ಸ್ಥಾನದಲ್ಲಿದೆ. ಪಾಕಿಸ್ತಾನದಲ್ಲಿ 9, ಭಾರತದಲ್ಲಿ 8, ಫಿಲಿಪ್ಫೀನ್ಸ್ ಹಾಗೂ ಸಿರಿಯಗಳಲ್ಲಿ ತಲಾ ನಾಲ್ಕು ಮತ್ತು ನೈಜೀರಿಯ ಮತ್ತು ಯೆಮೆನ್‌ಗಳಲ್ಲಿ ತಲಾ ಮೂರು ಪತ್ರಕರ್ತರ ಕಗ್ಗೊಲೆಯ ಪ್ರಕರಣಗಳು ವರದಿಯಾಗಿವೆ.

  ಇರಾಕ್,ಸೊಮಾಲಿಯಾ, ಬಾಂಗ್ಲಾದೇಶ,ಕ್ಯಾಮೆರೂನ್, ಹೊಂಡುರಾಸ್, ಪರಾಗ್ವೆ ರಶ್ಯ ಹಾಗೂ ಸ್ವೀಡನ್‌ನಲ್ಲಿಯೂ ಪತ್ರಕರ್ತರ ಹತ್ಯೆಗಳು ನಡೆದಿವೆ.

 ಇದರ ಜೊತೆಗೆ ಜ2021ರ ಮಾರ್ಚ್‌ನಲ್ಲಿ ವರದಿಯಾದಂತೆ ಜಗತ್ತಿನಾದ್ಯಂತ ಕನಿಷ್ಠ 229 ಮಂದಿ ಪತ್ರಕರ್ತರು, ತಮ್ಮ ಕರ್ತವ್ಯ ನಿರ್ವಹಣೆ ಕಾರಣದಿಂದಾಗಿ ಜೈಲಿನಲ್ಲಿದ್ದಾರೆಂದು ಐಎಫ್‌ಜೆ ತಿಳಿಸಿದೆ.

 ಟರ್ಕಿಯಲ್ಲಿ 67 ಮಂದಿ ಪತ್ರಕರ್ತರು ಬಂಧಿತರಾಗಿದ್ದು, ಆ ದೇಶವು ವಿಶ್ವದಲ್ಲೇ ಪತ್ರಕರ್ತರ ಪಾಲಿಗೆ ಅತಿ ದೊಡ್ಡ ಜೈಲರ್ ಎನಿಸಿಕೊಂಡಿದೆ. ಚೀನಾದಲ್ಲಿ 23 ಪತ್ರಕರ್ತರು, ಈಜಿಪ್ಟ್‌ನಲ್ಲ 20, ಎರಿಟ್ರಿಯದಲ್ಲಿ 16 ಹಾಗೂ ಸೌದಿ ಆರೇಬಿಯದಲ್ಲಿ 14 ಪತ್ರಕರ್ತರು ಬಂಧಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News