ಧಾರ್ಮಿಕ ಸ್ಥಳಗಳ ಸ್ವರೂಪ ಕಾಪಾಡುವ ಕಾನೂನಿನ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಕೆ
ಹೊಸದಿಲ್ಲಿ,ಮಾ.12:1947ರ ಆಗಸ್ಟ್ 15ರಲ್ಲಿ ಅಸ್ತಿತ್ವದಲ್ಲಿದ್ದ ಆರಾಧನಾ ಸ್ಥಳದ ಮೇಲೆ ಹಕ್ಕುಸ್ಥಾಪಿಸಲು ಅಥವಾ ಅದರ ಸ್ವರೂಪವನ್ನು ಬದಲಾಯಿಸಲು ಕೋರಿ, ಕಾನೂನುಮೊಕದ್ದಮೆಯನ್ನು ದಾಖಲಿಸುವುದನ್ನು ನಿಷೇಧಿಸುವ 1991ರ ಕಾನೂನಿನ ಕೆಲವು ನಿರ್ದಿಷ್ಟ ನಿಯಮಗಳ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಸುಪ್ರೀಕೋರ್ಟ್ ಶುಕ್ರವಾರ ಈ ಬಗ್ಗೆ ಕೇಂದ್ರದ ಪ್ರತಿಕ್ರಿಯೆಯನ್ನು ಕೇಳಿದೆ.
1991ರ ಕಾನೂನು ಮೂಲಭೂತವಾದಿ ಬರ್ಬರ ದಾಳಿಕೋರರು ಹಾಗೂ ಕಾನೂನು ಭಂಜಕರಿಂದ ದಾಳಿಗೊಳಗಾದ ಆರಾಧನಾ ಸ್ಥಳಗಳು ಅಥವಾ ಯಾತ್ರಾಸ್ಥಳಗಳ ಸ್ವರೂಪವನ್ನು ಆಗಸ್ಟ್ 15,1947ರ ವೇಳೆಗೆ ಅಸ್ವಿತ್ವದಲ್ಲಿದ್ದಂತಹ ರೀತಿಯಲ್ಲಿ ಉಳಿಸಿಕೊಳ್ಳುವುಕ್ಕೆ ಅವಕಾಶ ನೀಡುತ್ತದೆ. ಆದ್ದರಿಂದ '' ಏಕಪಕ್ಷೀಯ ಹಾಗೂ ಅವೈಚಾರಿಕವಾದ ಮತ್ತು ಅಪ್ರಸಕ್ತವಾದುದು'' ಎಂದು ಅರ್ಜಿಯು ಆರೋಪಿಸಿದೆ.
1991ರ ಆರಾಧನಾ ಸ್ಥಳಗಳ ಕಾಯ್ದೆ (ವಿಶೇಷ ನಿಯಮಗಳು)ಯ 2,3 ಹಾಗೂ 4 ಸೆಕ್ಷನ್‌ಗಳು ಯಾವುದೇ ವ್ಯಕ್ತಿ ಅಥವಾ ಧಾರ್ಮಿಕ ಪಂಗಡಕ್ಕೆ ಸೇರಿದ ಆರಾಧನಾ ಸ್ಥಳದ ಮೇಲಿನ ಹಕ್ಕಿನ ಮರುಸ್ಥಾಪನೆಗೆ ನ್ಯಾಯಾಂಗ ಪರಿಹಾರವನ್ನು ಪಡೆಯುವ ಹಕ್ಕನ್ನು ಕಿತ್ತುಕೊಳ್ಳುತ್ತವೆ ಎಂದು ಬಿಜೆಪಿ ನಾಯಕ ಹಾಗೂ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠವು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಗೋಪಾಲ ಸುಬ್ರಹ್ಮಣ್ಯನ್ ವಾದಿಸಿದ್ದರು.
ಕೆಲವು ಹಿಂದೂ ಸಂಘಟನೆಗಳು ಮಥುರಾ, ಕಾಶಿಯಲ್ಲಿರುವ ಕೆಲವು ಧಾರ್ಮಿಕ ಸ್ಥಳಗಳ ಮೇಲಿನ ಹಕ್ಕನ್ನು ಮರುಸ್ಥಾಪಿಸಲು ಯತ್ನಿಸುತ್ತಿವೆಯಾದರೂ, ಅದಕ್ಕೆ 1991ರ ಕಾನೂನು ನಿಷೇಧ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಅಶ್ವಿನಿ ಉಪಾಧ್ಯಾಯ ಅರ್ಜಿ ಸಲ್ಲಿಸಿರುವುದು ಹೆಚ್ಚಿನ ಮಹತ್ವ ಪಡೆದಿದೆ.