ಪ್ರಜಾಪ್ರಭುತ್ವದ ಮೌಲ್ಯಗಳು ನಮ್ಮನ್ನು ಒಗ್ಗೂಡಿಸಿವೆ: ‘ಕ್ವಾಡ್’ ಗುಂಪಿನ ಸಮಾವೇಶದಲ್ಲಿ ಪ್ರಧಾನಿ ಮೋದಿ

Update: 2021-03-12 16:02 GMT

 ಹೊಸದಿಲ್ಲಿ, ಮಾ. 12: ಭಾರತ, ಅಮೆರಿಕ, ಆಸ್ಟ್ರೇಲಿಯ ಮತ್ತು ಜಪಾನ್ ದೇಶಗಳನ್ನೊಳಗೊಂಡ ‘ಕ್ವಾಡ್’ (ನಾಲ್ಕು) ದೇಶಗಳ ಗುಂಪಿನ ಆನ್‌ಲೈನ್ ಸಮಾವೇಶ ಶುಕ್ರವಾರ ಸಂಜೆ (ಭಾರತೀಯ ಕಾಲಮಾನ) ನಡೆಯಿತು.

ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ಮತ್ತು ಜಪಾನ್ ಪ್ರಧಾನಿ ಯೊಶಿಹಿಡೆ ಸುಗ ಸಮಾವೇಶದಲ್ಲಿ ತಮ್ಮ ದೇಶಗಳ ಪರವಾಗಿ ಭಾಗವಹಿಸಿದರು.

‘‘ನಿಮ್ಮನ್ನು ನೋಡಲು ತುಂಬಾ ಸಂತೋಷವಾಗುತ್ತಿದೆ, ಪ್ರಧಾನಿ ಮೋದಿ’’ ಎಂಬುದಾಗಿ ಆರಂಭದಲ್ಲಿ ಮೋದಿಯನ್ನು ಉದ್ದೇಶಿಸಿ ಬೈಡನ್ ಹೇಳಿದರು. ಬೈಡನ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರಿಬ್ಬರು ಭೇಟಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವದ ಮೌಲ್ಯಗಳು ಈ ನಾಲ್ಕು ದೇಶಗಳನ್ನು ಒಂದುಗೂಡಿಸಿದೆ ಎಂದು ಹೇಳಿದರು. ‘ಕ್ವಾಡ್’ ಹಿಂದೂಮಹಾಸಾಗರ-ಪೆಸಿಫಿಕ್ ವಲಯದಲ್ಲಿ ಸ್ಥಿರತೆಯ ಮಹತ್ವದ ಆಧಾರಸ್ತಂಭವಾಗಿ ಉಳಿಯಲಿದೆ ಎಂದರು.

 ‘‘ಮಿತ್ರರ ನಡುವೆ ಇರುವುದಕ್ಕೆ ಸಂತೋಷವಾಗುತ್ತಿದೆ. ಈ ಸಮಾವೇಶವನ್ನು ಏರ್ಪಡಿಸಿರುವುದಕ್ಕಾಗಿ ನಾನು ಅಧ್ಯಕ್ಷ ಬೈಡನ್‌ಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಮುಕ್ತ, ತೆರೆದ ಮತ್ತು ಸರ್ವರನ್ನು ಒಳಗೊಳ್ಳುವ ಹಿಂದೂಮಹಾಸಾಗರ-ಪೆಸಿಫಿಕ್‌ಗಾಗಿನ ನಮ್ಮ ಬದ್ಧತೆಯು ನಮ್ಮನ್ನು ಒಗ್ಗೂಡಿಸಿವೆ. ನಮ್ಮ ಇಂದಿನ ಕಾರ್ಯಸೂಚಿಯಲ್ಲಿ ಲಸಿಕೆಗಳು, ಹವಾಮಾನ ಬದಲಾವಣೆ ಮತ್ತು ಹೊಸ ತಂತ್ರಜ್ಞಾನ ಸೇರಿದ್ದು, ಕ್ವಾಡ್ ಗುಂಪನ್ನು ಜಾಗತಿಕ ಒಳಿತಿಗಾಗಿ ಕೆಲಸ ಮಾಡುವ ಒಂದು ಶಕ್ತಿಯನ್ನಾಗಿ ಮಾಡಿವೆ’’ ಎಂದು ಪ್ರಧಾನಿ ಹೇಳಿದರು.

ಹಿಂದೂ ಮಹಾಸಾಗರ-ಪೆಸಿಫಿಕ್ ವಲಯದಲ್ಲಿ ಕ್ವಾಡ್ ಒಂದು ಪ್ರಮುಖ ಸಹಕಾರಿ ವೇದಿಕೆಯಾಗಲಿದೆ ಎಂದು ಇದೇ ಸಂದರ್ಭದಲ್ಲಿ ಮಾತನಾಡಿದ ಬೈಡನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News